ADVERTISEMENT

ರಶ್ದಿ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡವಿಲ್ಲ: ನಾಸಿರ್‌ ಖನಾನಿ

ದಾಳಿ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿದ ಇರಾನ್‌

ಏಜೆನ್ಸೀಸ್
Published 15 ಆಗಸ್ಟ್ 2022, 13:39 IST
Last Updated 15 ಆಗಸ್ಟ್ 2022, 13:39 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ   

ದುಬೈ: ‘ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡ ಇಲ್ಲ’ ಎಂದು ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ನಾಸಿರ್‌ ಖನಾನಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ರಶ್ದಿ ಅವರ ಮೇಲೆ ನಡೆದ ದಾಳಿ ಬಳಿಕ ಇರಾನ್‌ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ.

‘ಈ ದಾಳಿಯ ಸಂಬಂಧ ಯಾರನ್ನಾದರೂ ದೂಷಿಸಬೇಕೆಂದಿದ್ದರೆ, ಅದು ರಶ್ದಿ ಅವರನ್ನು ಮತ್ತು ಅವರ ಹಿಂಬಾಲಕರನ್ನು ದೂಷಿಸಬೇಕಷ್ಟೆ. ಇರಾನ್‌ ಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯಾರಿಗೂ ಹಕ್ಕಿಲ್ಲ’ ಎಂದು ಖನಾನಿ ಹೇಳಿದ್ದಾರೆ.

‘1979ರ ಇಸ್ಲಾಮಿಕ್‌ ಕ್ರಾಂತಿಯ ನಂತರ, ವಿಶ್ವದ ಎಲ್ಲಿ ಇಂಥ ದಾಳಿಗಳಾದರೂ ಇರಾನ್‌ನನ್ನು ದೂಷಿಸಲಾಗುತ್ತದೆ. ಇದು ಸರಿಯಲ್ಲ. ರಶ್ದಿ ಅವರ ದಾಳಿಯ ಕುರಿತು ಅಮೆರಿಕದ ಮಾಧ್ಯಮಗಳು ಮಾಡುತ್ತಿರುವ ವರದಿಗಳನ್ನು ಬಿಟ್ಟರೆ ನಮ್ಮ ಬಳಿ ಬೇರೆ ಯಾವುದೇ ಮಾಹಿತಿ ಇಲ್ಲ’ ಎಂದರು.

ADVERTISEMENT

‘ದಾಳಿಕೋರನ ಕೃತ್ಯವನ್ನು ಖಂಡಿಸುವ ಬದಲು ಇಸ್ಲಾಂನ ಬಗ್ಗೆ ದಾಳಿಕೋರನಿಗೆ ಇರುವ ನಂಬಿಕೆಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಮಾತನಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಶ್ದಿ ಅವರ ಹತ್ಯೆ ಮಾಡುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ರಶ್ದಿ ಅವರ ‘ದಿ ಸಟಾನಿಕ್‌ ವರ್ಸಸ್‌’ ಕಾದಂಬರಿ ಪ್ರಕಟವಾದ ಬಳಿಕ ಖೊಮೇನಿ ಈ ಘೋಷಣೆ ಮಾಡಿದ್ದರು. ಈ ಕಾರಣದಿಂದಾಗಿಯೇ ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡ ಇರಬಹುದು ಎಂದು ಅನುಮಾನಿಸಲಾಗುತ್ತಿದೆ.

ಪೂರ್ವಯೋಜಿತ ಕೃತ್ಯ: ಮಗ, ಮಾಜಿ ಪತ್ನಿ ಅಭಿಪ್ರಾಯ

ನ್ಯೂಯಾರ್ಕ್‌ (ಪಿಟಿಐ): ತೀವ್ರವಾಗಿ ಹಲ್ಲೆಗೊಳಗಾದರೂ ರಶ್ದಿ ಅವರ ‘ಸ್ಫೂರ್ತಿಯುತ ಮತ್ತು ದಿಟ್ಟತನ’ದ ಸ್ವಭಾವ ಕಳೆಗುಂದಿಲ್ಲ ಎಂದು ಸಲ್ಮಾನ್‌ ರಶ್ದಿ ಅವರ ಮಗ ಮತ್ತು ಮಾಜಿ ಪತ್ನಿ ಭಾನುವಾರ ಹೇಳಿದ್ದಾರೆ. ರಶ್ದಿ ಅವರ ಮೇಲಿನ ದಾಳಿಯು ಪೂರ್ವಯೋಜಿತವಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ರಶ್ದಿ ಅವರ ಮಾಜಿ ಪತ್ನಿ ಪದ್ಮಾ ಲಕ್ಷ್ಮೀ ಅವರು ಟ್ವೀಟ್‌ ಮಾಡಿ, ‘ಶುಕ್ರವಾರದ ದುಃಸ್ವಪ್ನದಿಂದ ರಶ್ದಿ ಅವರು ಹೊರಬರುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಆಗಿರುವುದರಿಂದ ಸಮಾಧಾನವಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ’ ಎಂದಿದ್ದಾರೆ. ಚೆನ್ನೈನಲ್ಲಿ ಹುಟ್ಟಿದ ಲಕ್ಷ್ಮೀ ಮತ್ತು ರಶ್ದಿ ಅವರು 2007ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

‘ರಶ್ದಿ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್‌ ಅನ್ನು ಶನಿವಾರತೆಗೆಯಲಾಯಿತು. ಇದು ಬಹಳ ಸಮಾಧಾನ ನೀಡಿತು. ಇದರಿಂದ ಅವರು ಕೆಲವು ಮಾತುಗಳನ್ನಾಡಲು ಸಾಧ್ಯವಾಯಿತು’ ಎಂದು ರಶ್ದಿ ಅವರ ಮಗ ಜಾಫರ್‌ ರಶ್ದಿ ಟ್ವೀಟ್‌ ಮಾಡಿದ್ದಾರೆ.

ರಶ್ದಿ ಅವರ ಮೇಲೆ ದಾಳಿಯಾಗುತ್ತಿದ್ದಂತೆಯೇ ಅವರನ್ನು ಕಾಪಾಡಿ, ಪ್ರಥಮ ಚಿಕಿತ್ಸೆ ನೀಡಲು ನೆರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರಿಗೆ ರಶ್ದಿ ಕುಟುಂಬ ಧನ್ಯವಾದ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.