ADVERTISEMENT

ಕತಾರ್‌, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಏಜೆನ್ಸೀಸ್
Published 23 ಜೂನ್ 2025, 18:51 IST
Last Updated 23 ಜೂನ್ 2025, 18:51 IST
   

ದುಬೈ: ಕತಾರ್‌ ಹಾಗೂ ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್‌ ಸೋಮವಾರ ಕ್ಷಿಪಣಿ ದಾಳಿ ನಡೆಸಿತು.

ತನ್ನ ದೇಶದ ಪರಮಾಣು ಘಟಕಗಳ ಮೇಲೆ ಅಮೆರಿಕ ಬಾಂಬ್‌ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿದೆ. 

ತನ್ನ ದೇಶದ ಅಲ್‌–ಯುಡೀಡ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದನ್ನು ಕತಾರ್‌ ಖಂಡಿಸಿದೆ. ಇರಾನ್‌ನ ಎಲ್ಲ ಕ್ಷಿಪಣಿಗಳನ್ನು ಪ್ರತಿಬಂಧಿಸಲಾಗಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ. ವಾಯುಪ್ರದೇಶವು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ. 

ADVERTISEMENT

ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು, ಇರಾನ್‌ ದಾಳಿ ನಡೆಸಿರುವುದನ್ನು ಅಮೆರಿಕ ಸರ್ಕಾರ ಸೋಮವಾರ ರಾತ್ರಿ ಖಚಿತಪಡಿಸಿದೆ. ಅಲ್‌–ಯುಡೀಡ್‌ ವಾಯುನೆಲೆಯು ಕತಾರ್‌, ಅಮೆರಿಕ ಹಾಗೂ ಬ್ರಿಟನ್‌ ದೇಶಗಳ ಜಂಟಿ ವಾಯು ಕಾರ್ಯಾಚರಣಾ ನೆಲೆಯಾಗಿದೆ.

‘ಅಮೆರಿಕದ ಬಾಂಬ್‌ ದಾಳಿಗೆ ನೀಡಿರುವ ಸರಿಯಾದ ಉತ್ತರವಿದು. ಜನನಿಬಿಡ ಪ್ರದೇಶದಿಂದ ಹೊರಗಿದ್ದ ಕಾರಣ ಈ ನೆಲೆಯನ್ನು ಗುರಿಯಾಗಿಸಲಾಗಿತ್ತು’ ಎಂದು ಇರಾನ್‌ ತಿಳಿಸಿದೆ. 

ಇರಾನ್‌ನ ಸರ್ಕಾರಿ ಚಾನೆಲ್‌ನಲ್ಲಿ ಯುದ್ಧದ ಸಂಗೀತ ಪ್ರಸಾರವಾಗುತ್ತಿದ್ದಂತೆಯೇ, ದಾಳಿ ನಡೆಸಿರುವುದನ್ನು ಘೋಷಿಸಿತು. 

‘ಅಮೆರಿಕದ ಆಕ್ರಮಣಶೀಲತೆಗೆ ಇದು ಅದ್ಭುತವೂ ಯಶಸ್ವಿವೂ ಆದ ಪ್ರತಿಕ್ರಿಯೆ’ ಎಂದು ಶೀರ್ಷಿಕೆ ಸಹಿತ ಟಿ.ವಿ ಪರದೆಯಲ್ಲಿ ಸುದ್ದಿ ಪ್ರಸಾರಗೊಂಡಿತು.

ಅದೇ ರೀತಿ, ಪಶ್ಚಿಮ ಇರಾಕ್‌ನಲ್ಲಿರುವ ‘ಯೆನ್‌–ಅಲ್‌–ಅಸ್ಸಾದ್‌’ ಅಮೆರಿಕ ಸೇನಾ ನೆಲೆಯ ಮೇಲೂ ಇರಾನ್‌ ದಾಳಿ ನಡೆಸಿತು. ಈ ವಿಚಾರವನ್ನು ಇರಾಕ್‌ನ ಭದ್ರತಾ ಅಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. 

ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ದಾಳಿ ನಡೆಸಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ದಾಳಿ ಬಳಿಕ ನಡೆದಿದ್ದೇನು?

  • ಇರಾನ್‌ ದಾಳಿಯ ಬೆನ್ನಲ್ಲೇ ಕತಾರ್‌ ವಾಯುಪ್ರದೇಶ ತಾತ್ಕಾಲಿಕ ಬಂದ್‌

  • ಸೂಕ್ತ ಆಶ್ರಯ ಪಡೆದುಕೊಳ್ಳಿ: ಕತಾರ್‌ನಲ್ಲಿ ನೆಲಸಿದ ಅಮೆರಿಕ, ಬ್ರಿಟನ್‌ನ ನಾಗರಿಕರಿಗೆ ಸೂಚನೆ

  • ದೋಹಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ 100 ವಿಮಾನಗಳ ಮಾರ್ಗ ಬದಲು 

  • ಮಧ್ಯಪ್ರಾಚ್ಯದ ಹಲವೆಡೆ ವಾಯುಮಾರ್ಗ ನಿರ್ಬಂಧ– ಹಲವು ವಿಮಾನಗಳ ಮಾರ್ಗ ಮರು ಸಂಯೋಜಿಸಿದ ಎತಿಹಾದ್‌ ಏರ್‌ವೇಸ್‌

ಅಣು ಘಟಕಕ್ಕೆ ಇಸ್ರೇಲ್ ದಾಳಿ:

ಟೆಹರಾನ್‌/ಜೆರುಸಲೇಂ/ವಿಯೆನ್ನಾ: ಇರಾನ್‌ನ ಫೋರ್ಡೊ ಪರಮಾಣು ಘಟಕದ ಮೇಲೆ ಇಸ್ರೇಲ್‌ ಸೋಮವಾರ ದಾಳಿ ನಡೆಸಿದೆ. ಫೋರ್ಡೊ ಸೇರಿದಂತೆ ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕವು  ಭಾನುವಾರ ಭಾರಿ ತೂಕದ ಬಾಂಬ್‌ಗಳನ್ನು ಬೀಳಿಸಿತ್ತು.

ಮೂರೂ ಪರಮಾಣು ಘಟಕಗಳಲ್ಲಿ ಫೋರ್ಡೊ ಘಟಕವು ಭಾರಿ ಸುರಕ್ಷಿತ ಎನ್ನಲಾಗಿತ್ತು. ವಾಯು ದಾಳಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪರ್ವತವನ್ನು ಕೊರೆದು ಸುಮಾರು 80ರಿಂದ 90 ಮೀಟರ್‌ ಆಳದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.

‘ಶೇ 60ರಷ್ಟು ಶುದ್ಧತೆಯ ಯುರೇನಿಯಂ ಖನಿಜ ಇರುವ ಈ ಘಟಕವನ್ನು ತಲುಪುವ ದಾರಿಯನ್ನು ಧ್ವಂಸ ಮಾಡಿದ್ದೇವೆ’ ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ‘ನಮ್ಮ ದಾಳಿಯಿಂದ ಘಟಕಗಳು ಸಂಪೂರ್ಣವಾಗಿ ನಾಶವಾಗಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ.

ಅಮೆರಿಕವು ಪರಮಾಣು ಘಟಕಗಳ ಮೇಲೆ ದಾಳಿ ಮಾಡುವ ಮುನ್ನವೇ ಸುಮಾರು 400 ಕೆ.ಜಿ ಯುರೇನಿಯಂ ದಾಸ್ತಾನನ್ನು ಇರಾನ್‌ ಬೇರೆಡೆಗೆ ಸ್ಥಳಾಂತ ರಿಸಿತ್ತು ಎನ್ನುವ ಮಾತೂ ಕೇಳಿಬರುತ್ತಿದೆ.

ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳಿಂದ ಎಷ್ಟರ ಮಟ್ಟಿಗೆ ಹಾನಿಗಳಾಗಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ, ಕೆಲವು ಸುದ್ದಿ ಸಂಸ್ಥೆಗಳು ಉಪಗ್ರಹಗಳ ಚಿತ್ರಗಳನ್ನು ಅವಲೋಕಿಸಿ ಹಾನಿಯ ಅಂದಾಜು ಮಾಡಲು ಯತ್ನಿಸಿವೆ.

ಸೌದಿ ಅರೇಬಿಯಾ ಖಂಡನೆ–ಕತಾರ್‌ಗೆ ಬೆಂಬಲ:

‘ಕತಾರ್ ಮೇಲೆ ಇರಾನ್‌ ದಾಳಿ ನಡೆಸಿರುವುದು ಸಮರ್ಥನೀಯವಲ್ಲ. ಈಗಿನ ಸ್ಥಿತಿ ಎದುರಿಸಲು ತನ್ನ ಎಲ್ಲ ಸಾಮರ್ಥ್ಯಗಳನ್ನು ಬಳಸಿಕೊಂಡು, ನೆರವು ನೀಡಲಾಗುವುದು’ ಎಂದು ಸೌದಿ ಅರೇಬಿಯಾ ಪ್ರತಿಕ್ರಿಯಿಸಿದೆ.  ‘ಈ ದಾಳಿಯು ಸಮರ್ಥನೀಯವಲ್ಲ. ಯಾವುದೇ ನೆರವು ನೀಡಲು ಸಿದ್ಧರಿದ್ದೇವೆ’ ಎಂದು ಸೌದಿ ಅರೇಬಿಯಾ ವಿದೇಶಾಂಗ ಇಲಾಖೆಯು ಪ್ರಕಟಣೆಯಲ್ಲಿ ಹೇಳಿದೆ.

‘ಘಟಕದ ಭೇಟಿಗೆ ಅವಕಾಶ ನೀಡಿ’

‘ನಿಮ್ಮ ಪರಮಾಣು ಘಟಕಗಳ ಭೇಟಿಗೆ ಅವಕಾಶ ನೀಡಿ’ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ನಿರ್ದೇಶಕ ರಾಫೆಲ್‌ ಗ್ರೋಸಿ ಅವರು ಇರಾನ್‌ ಅನ್ನು ಆಗ್ರಹಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯ ತುರ್ತು ಸಭೆಯು ವಿಯೆನ್ನಾದಲ್ಲಿ ಸೋಮವಾರ ನಡೆಯಿತು.

‘ಫೋರ್ಡೊ ಘಟಕದ ಬಳಿ ದೊಡ್ಡ ದೊಡ್ಡ ಕುಳಿಗಳು ಬಿದ್ದಿವೆ. ಭೂಮಿ ಆಳಕ್ಕೆ ಹೋಗಿ ಸ್ಫೋಟಗೊಳ್ಳುವ ಭಾರಿ ಗಾತ್ರದ ಬಾಂಬ್‌ಗಳಿಂದಲೇ ಈ ಕುಳಿಗಳು ಬಿದ್ದಿವೆ ಎನ್ನುವುದು ಖಚಿತ. ಅಮೆರಿಕದ ದಾಳಿಯಿಂದ ಘಟಕಕ್ಕೆ ದೊಡ್ಡ ಮಟ್ಟದ ಹಾನಿಯಂತೂ ಆಗಿದೆ. ಏನೇ ಆದರೂ, ಆ ಸ್ಥಳಕ್ಕೆ ಭೇಟಿ ನೀಡದ ಹೊರತು ಹಾನಿಯ ಅಂದಾಜು ಅಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.