ADVERTISEMENT

ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದರೆ ಕಠಿಣ ಕ್ರಮ: ಇರಾನ್‌ಗೆ ಟ್ರಂಪ್ ಎಚ್ಚರಿಕೆ

ಏಜೆನ್ಸೀಸ್
Published 14 ಜನವರಿ 2026, 2:50 IST
Last Updated 14 ಜನವರಿ 2026, 2:50 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ‍ಫೇಸ್‌ಬುಕ್ ಚಿತ್ರ

ವಾಷಿಂಗ್ಟನ್: ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದಾಗಿ ಇರಾನ್ ಎಚ್ಚರಿಕೆ ಬೆನ್ನಲ್ಲೇ, ಹಾಗೇನಾದರೂ ಮಾಡಿದರೆ ಅತ್ಯಂತ ಕಠಿಣ ಕ್ರಮ ಜರುಗಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ADVERTISEMENT

ಅಮೆರಿಕದ ಈ ಬೆದರಿಕೆಯು ಮಿಲಿಟರಿ ಮಧ್ಯಪ್ರವೇಶದ ಮುನ್ಸೂಚನೆಯಾಗಿದೆ ಎಂದು ಇರಾನ್ ಹೇಳಿದೆ.

ಇರಾನ್‌ನ ಸರ್ವೋಚ್ಛ ನಾಯಕರ ವಿರುದ್ಧದ ಇದುವರೆಗಿನ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿರುವ ಪ್ರತಿಭಟನೆಗಳ ಸಮಯದಲ್ಲಿ ಸಾವಿರಾರು ಜನರನ್ನು ಕೊಲ್ಲಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರ ಕಳವಳಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ ಇರಾನ್‌ನ ವಿಶ್ವಸಂಸ್ಥೆಯ ಮಿಷನ್ ಎಕ್ಸ್‌ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, ಅಮೆರಿಕ ‘ಪ್ಲೇಬುಕ್"’ಮತ್ತೆ ವಿಫಲಗೊಳ್ಳುತ್ತದೆ ಎಂದು ಪ್ರತಿಜ್ಞೆ ಮಾಡಿದೆ.

'ಇರಾನ್ ಕುರಿತಾದ ಅಮೆರಿಕದ ನಡೆಯು ನಾಯಕತ್ವ ಬದಲಾವಣೆಯ ಉದ್ದೇಶ ಹೊಂದಿದೆ. ಇರಾನ್ ಮೇಲಿನ ನಿರ್ಬಂಧಗಳು, ಬೆದರಿಕೆಗಳು, ಯೋಜಿತ ಅಶಾಂತಿ ಸೃಷ್ಟಿಸಿರುವುದು ಮತ್ತು ಅವ್ಯವಸ್ಥೆಯು ಮಿಲಿಟರಿ ಹಸ್ತಕ್ಷೇಪಕ್ಕೆ ನೆಪ ಹುಡುಕುವ ಕಾರ್ಯ ವಿಧಾನವಾಗಿದೆ’ಎಂದು ಪೋಸ್ಟ್ ಹೇಳಿದೆ.

ದೇಶದಾದ್ಯಂತ ನಡೆದ ಸಾಮೂಹಿಕ ಪ್ರತಿಭಟನೆಗಳ ನಂತರ ಗುರುವಾರದಿಂದ ಇರಾನ್ ಅಧಿಕಾರಿಗಳು ದೇಶದ ಮೇಲೆ ಮತ್ತೆ ಹಿಡಿತ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸರ್ಕಾರವು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದೆ. ಐದು ದಿನಗಳಿಂದ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವ ಮೂಲಕ ಪ್ರತಿಭಟನೆಯನ್ನು ಮತ್ತೆ ಹತ್ತಿಕ್ಕಿದೆ ಎಂದು ವರದಿಯಾಗಿದೆ.

ಸಹಾಯ ಸಿಗಲಿದೆ ಎಂದು ಇರಾನ್‌ನ ಪ್ರತಿಭಟನಾಕಾರರಿಗೆ ಈ ಹಿಂದೆ ಟ್ರಂಪ್ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ, ಪ್ರತಿಭಟನೆ ಸಮಯದಲ್ಲಿ ಬಂಧಿಸಲಾದ ಕೆಲವರನ್ನು ದೇಶದ್ರೋಹದ ಆರೋಪದಡಿ ಗಲ್ಲಿಗೇರಿಸಲು ಇರಾನ್ ಸರ್ಕಾರ ಮುಂದಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಪ್ರತಿಭಟನಾಕಾರರನ್ನು ಗಲ್ಲಿಗೇರಿಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಹಿಂದೆ ಪ್ರತಿಭಟನಾಕಾರರಿಗೆ ಗುಂಡಿಕ್ಕಿ ಕೊಂದಿರಿ. ಈಗ ಗಲ್ಲಿಗೇರಿಸಲು ಮುಂದಾಗಿದ್ದೀರಿ. ಅದು ಹೇಗೆ ನಡೆಯುತ್ತದೆ ನೋಡೋಣ ಎಂದು ಗುಡುಗಿದ್ದಾರೆ.

ಈ ನಡುವೆ, ಇರಾನಿನ ರಾಜಧಾನಿಯ ದಕ್ಷಿಣ ಭಾಗದ ಕಹ್ರಿಜಾಕ್ ಶವಾಗಾರದಲ್ಲಿ ಸಾಲು ಸಾಲು ಶವಗಳು ಕಂಡುಬಂದಿದ್ದು, ಕಪ್ಪು ಚೀಲಗಳಲ್ಲಿ ಅವುಗಳನ್ನು ಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಕಂಡುಬಂದಿದೆ. ಕೆಲ ಜನರು ಗೋಗರೆಯುತ್ತಾ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿರುವುದನ್ನೂ ಕಾಣಬಹುದಾಗಿದೆ.

ಮಂಗಳವಾರದಿಂದ ಇರಾನ್‌ನಲ್ಲಿ ಅಂತರರಾಷ್ಟ್ರೀಯ ದೂರವಾಣಿ ಸಂಪರ್ಕಗಳನ್ನು ಪುನಃಸ್ಥಾಪಿಸಲಾಗಿದ್ದು, ಹೊರಹೋಗುವ ಕರೆಗಳಿಗೆ ಮಾತ್ರ ನಿರ್ಬಂಧವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.