ಟೆಹರಾನ್: ತನ್ನ ಪರಮಾಣು ಯೋಜನೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ‘ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಇರಾನ್ ಸರ್ಕಾರ ಮಂಗಳವಾರ ಹೇಳಿದೆ.
ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿತ್ತು. ಇದರಿಂದ ಮೂರು ಪರಮಾಣು ಘಟಕಗಳಿಗೂ ಹಾನಿ ಉಂಟಾಗಿದೆ.
‘ಅಣು ಯೋಜನೆ ಮುಂದುವರಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ದಾಳಿಯಿಂದ ಆಗಿರುವ ಹಾನಿಯನ್ನು ಅಂದಾಜು ಮಾಡುತ್ತಿದ್ದೇವೆ’ ಎಂದು ಇರಾನ್‌ನ ಅಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಇಸ್ಲಾಮಿ ಹೇಳಿದ್ದಾರೆ.
‘ಪರಮಾಣು ಘಟಕಗಳನ್ನು ಪುನರಾರಂಭಿಸಲು ಬೇಕಾದ ಯೋಜನೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಲಾಗಿದೆ ಮತ್ತು ಉತ್ಪಾದನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ’ ಎಂದು ತಿಳಿಸಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರೊಬ್ಬರು, ತಮ್ಮ ದೇಶದಲ್ಲಿ ಶುದ್ಧೀಕರಿಸಿದ ಯುರೇನಿಯಂನ ದಾಸ್ತಾನು ಇದ್ದು, ‘ಆಟ ಇನ್ನೂ ಮುಗಿದಿಲ್ಲ’ ಎಂದಿದ್ದಾರೆ.
ಫೋರ್ಡೊ ಪರಮಾಣು ಘಟಕದ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್ ಕೂಡಾ ದಾಳಿ ಮಾಡಿತ್ತು. ‘ಫೋರ್ಡೊ ಘಟಕವನ್ನು ತಲುಪುವ ದಾರಿಯನ್ನು ಧ್ವಂಸ ಮಾಡಿದ್ದೇವೆ’ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿತ್ತು.
ಕೈದಿಗಳ ಸ್ಥಳಾಂತರ
ಟೆಹರಾನ್‌ನ ಎವಿನ್ ಕಾರಾಗೃಹದಲ್ಲಿರುವ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್‌ನ ನ್ಯಾಯಾಂಗ ಮಂಗಳವಾರ ತಿಳಿಸಿದೆ.
ಖಮೇನಿ ಮತ್ತು ಇಲ್ಲಿನ ಸರ್ಕಾರದ ವಿರುದ್ಧ ಇರುವ ರಾಜಕೀಯ ಕೈದಿಗಳನ್ನು ಇರಿಸಿರುವ ಎವಿನ್ ಕಾರಾಗೃಹದ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿತ್ತು. ಇದರಿಂದ ಜೈಲಿನ ಒಂದು ಭಾಗಕ್ಕೆ ಹಾನಿಯಾಗಿದೆ.
‘ಎವಿನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳನ್ನು ಟೆಹರಾನ್ ಪ್ರಾಂತ್ಯದೊಳಗಿನ ಇತರ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ರಕ್ಷಣಾ ಕಾರ್ಯಾಚರಣೆ ತಂಡಗಳಿಗೆ ಅನುವು ಮಾಡಿಕೊಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನ್ಯಾಯಾಂಗದ ಮಿಜಾನ್ ವೆಬ್‌ಸೈಟ್ ತಿಳಿಸಿದೆ.
ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಎಷ್ಟು ಕೈದಿಗಳು ಇದ್ದರು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಕ್ಷಿಪಣಿ ನಿಷ್ಕ್ರಿಯ:
‘ಇಸ್ರೇಲ್ ದಾಳಿ ವೇಳೆ ಎವಿನ್ ಕಾರಾಗೃಹದ ಬಳಿ ಬಿದ್ದ ಎರಡು ಕ್ಷಿಪಣಿಗಳು ಸ್ಫೋಟಗೊಳ್ಳದೇ ಇದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಹಲವರ ಸಾವು
ಕಾರಾಗೃಹದ ಮೇಲಿನ ದಾಳಿಯಲ್ಲಿ ಸಾಕಷ್ಟು ಸಾವು–ನೋವು ಉಂಟಾಗಿದೆ ಎಂದು ನ್ಯಾಯಾಂಗದ ವಕ್ತಾರ ಅಸ್ಗರ್ ಜಹಾಂಗೀರ್ ಹೇಳಿದ್ದಾರೆ.
‘ಆಡಳಿತ ಮತ್ತು ನ್ಯಾಯಾಂಗದ ಸಿಬ್ಬಂದಿ, ಕೈದಿಗಳ ಕುಟುಂಬ ಸದಸ್ಯರು ಮತ್ತು ಕೈದಿಗಳು ಸೇರಿದಂತೆ ನಮ್ಮ ಹಲವು ನಾಗರಿಕರು ಗಾಯಗೊಂಡಿದ್ದಾರೆ ಹಾಗೂ ಹುತಾತ್ಮರಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.