ಇರಾನ್ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಬಟ್ಟೆ ಇರಾನ್‌ನ ಯೂನಿವರ್ಸಿಟಿಯಲ್ಲಿ ಹಿಜಾಬ್ ವಿರುದ್ಧ ಅರೆನಗ್ನವಾಗಿ ಪ್ರತಿಭಟಿಸಿದ ಯುವತಿ
ದುಬೈ: ದೇಶದಲ್ಲಿ ಕಠಿಣ ಇಸ್ಲಾಮಿಕ್ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದನ್ನು ವಿರೋಧಿಸಿ ಇರಾನ್‌ನ ಇಸ್ಲಾಮಿಕ್ ಆಜಾದ್ ಯುನಿವರ್ಸಿಟಿ ಆವರಣದಲ್ಲಿ ಒಬ್ಬ ಯುವತಿ ಒಳ ಉಡುಪು ಮಾತ್ರ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಮಾಧ್ಯಮಗಳು ಕೂಡ ಈ ವಿಡಿಯೊಗಳನ್ನು ಹಂಚಿಕೊಂಡಿವೆ.
ಶನಿವಾರ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ವಿಭಾಗವೊಂದರ ಭದ್ರತಾ ಸಿಬ್ಬಂದಿ, ಯುವತಿಯನ್ನು ಬಂಧಿಸಿದ ದೃಶ್ಯಗಳು ವಿಡಿಯೊದಲ್ಲಿವೆ.
‘ಯುವತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂಬುದು ಪೊಲೀಸರು ಕೈಗೊಂಡ ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ವಿಶ್ವವಿದ್ಯಾಲಯ ವಕ್ತಾರ ಅಮಿರ್ ಮಹಜೂಬ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವತಿ ಉದ್ಧೇಶಪೂರ್ವಕವಾಗಿಯೇ ಈ ಬಗೆಯ ಪ್ರತಿಭಟನೆ ಕೈಗೊಂಡಿದ್ದಾಳೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
‘ಒಳ ಉಡುಪು ಮಾತ್ರ ಧರಿಸಿ ಸಾರ್ವಜನಿಕವಾಗಿ ಈ ರೀತಿ ಓಡಾಡುವುದು ಬಹುತೇಕ ಮಹಿಳೆಯರ ಪಾಲಿಗೆ ಭಯಾನಕ ಸಂಗತಿಗಳಲ್ಲೊಂದು. ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬ ಸರ್ಕಾರದ ಅಸಂಬದ್ಧ ನಿರ್ದೇಶನಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಇದು’ ಎಂದು ಲೀ ಲಾ ಎಂಬುವವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಕುರಿತ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.
ಈ ರೀತಿ ಓಡಾಡಿದ ಯುವತಿಯ ಸ್ಥಿತಿ ನಂತರ ಏನಾಗಿದೆ ಎಂಬುದು ತಿಳಿದಿಲ್ಲ. ‘ಈ ರೀತಿ ಪ್ರತಿಭಟನೆ ನಡೆಸಿದ ಯುವತಿ ವಿಪರೀತ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಳು. ತಪಾಸಣೆ ನಂತರ ಆಕೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ’ ಎಂದು ಮೂಲಗಳನ್ನು ಉಲ್ಲೇಖಿಸಿ, ಇರಾನ್‌ನ ಜನಪ್ರಿಯ ಆನ್‌ಲೈನ್ ಸುದ್ದಿತಾಣ ‘ಹಮ್‌ಶಹ್ರಿ’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.