ADVERTISEMENT

ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಹೋರಾಟ: ಪ್ರತಿಭಟನೆ ದಮನಕ್ಕೆ ಸರ್ಕಾರದಿಂದ ತಂತ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 14:27 IST
Last Updated 23 ಸೆಪ್ಟೆಂಬರ್ 2022, 14:27 IST
ಇರಾನ್‌ನ ಟೆಹರಾನ್‌ನಲ್ಲಿ ಶುಕ್ರವಾರ ನಡೆದ ಹಿಜಾಬ್‌ ಪರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ –ಎಎಫ್‌ಪಿ ಚಿತ್ರ
ಇರಾನ್‌ನ ಟೆಹರಾನ್‌ನಲ್ಲಿ ಶುಕ್ರವಾರ ನಡೆದ ಹಿಜಾಬ್‌ ಪರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ –ಎಎಫ್‌ಪಿ ಚಿತ್ರ   

ಪ್ಯಾರಿಸ್‌/ದುಬೈ/ಟೆಹರಾನ್‌ (ಎಎಫ್‌ಪಿ, ಎಪಿ): ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಹೋರಾಟವನ್ನು ದಮನಿಸಲು ಸರ್ಕಾರವುಹಲವು ತಂತ್ರಗಳನ್ನು ಹೂಡಿದೆ. ಮಹಸಾ ಅಮೀನಿ ಹತ್ಯೆಯನ್ನು ಬೆಳಕಿಗೆ ತಂದ ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ಹಿಜಾಬ್‌ ಪರವಾದ ಸರ್ಕಾರಿ ಪ್ರಾಯೋಜಿತ ಮೆರವಣಿಗೆಗಳನ್ನೂ ಆಯೋಜಿಸಲಾಗುತ್ತಿದೆ. ಈ ಮಧ್ಯೆ, ಹಿಜಾಬ್‌ ವಿರೋಧಿ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ.

ಅಮೀನಿ ಅವರು ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ವರದಿ ಮಾಡಿದ ಟೆಹರಾನ್‌ನ ಪತ್ರಕರ್ತೆ ನಿಲುಫರ್‌ ಹಮೀದಿ ಅವರನ್ನು ಬಂಧಿಸಲಾಗಿದೆ. ಟೆಹರಾನ್‌ನ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ವರದಿ ಮಾಡುತ್ತಿರುವ, ಪತ್ರಿಕಾಛಾಯಾಗ್ರಾಹಕ ಯಲ್ದಾ ಮೊಯಿರಿ ಅವರನ್ನು ಬಂಧಿಸಲಾಗಿದೆ.

ಇರಾನ್‌ನ ಪ್ರಮುಖ ಸಾಮಾಜಿಕ ಕಾರ್ಯಕರ್ತರಾದ ಮಾಜಿದ್‌ ತವಕೋಲಿ, ಹೊಸ್ಸೀನ್‌ ರೊನಗಿ ಅವರನ್ನು ಬಂಧಿಸಲಾಗಿದೆ.

ADVERTISEMENT

ಮೃತರ ಸಂಖ್ಯೆಯಲ್ಲಿ ಗೊಂದಲ: ಇರಾನ್‌ನ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಒಂದು ಲೆಕ್ಕ ನೀಡಿದರೆ, ಸರ್ಕಾರಿ ಸುದ್ದಿವಾಹಿನಿ ಮತ್ತೊಂದು ಸಂಖ್ಯೆ ಹೇಳುತ್ತಿದೆ. ಮಾನವ ಹಕ್ಕು ಹೋರಾಟ ಸಂಸ್ಥೆಗಳು ಇನ್ನೊಂದು ಸಂಖ್ಯೆ ನೀಡುತ್ತಿವೆ.

ಸರ್ಕಾರಿ ಸುದ್ದಿವಾಹಿನಿಯೊಂದು ಶುಕ್ರವಾರದವರೆಗೆ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 26 ಎಂದು ಹೇಳಿದರೆ, ಸರ್ಕಾರವು ಗುರುವಾರದವರೆಗೆ ಐವರು ಭದ್ರತಾ ಸಿಬ್ಬಂದ ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ. ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ ಸಂಸ್ಥೆ 36 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಪ್ರಾಕ್ಸಿ ಸರ್ವರ್‌ ಬಳಕೆ: ಇರಾನ್‌ ಪ್ರಧಾನಿ ಅಲಿ ಕಮೇನಿ ಅವರ ಪ್ರತಿಕೃತಿಯನ್ನುಪ್ರತಿಭಟನಕಾರರು ದಹಿಸುತ್ತಿರುವ ಮತ್ತು ವಿರೂಪಗೊಳಿಸುತ್ತಿರುವ ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿವೆ. ಜೊತೆಗೆ, ಭದ್ರತಾ ಪಡೆಗಳು ಪ್ರತಿಭಟನಕಾರರ ಮೇಲೆ ಅರೆ ಸ್ವಯಂಚಾಲಿತ ಶಸ್ತ್ರಗಳನ್ನು ಪ್ರಯೋಗಿಸುತ್ತಿರುವ ವಿಡಿಯೊಗಳು ವೈರಲ್‌ ಆಗಿವೆ.

ಇರಾನ್‌ ಸರ್ಕಾರವು ಇಂಟರ್‌ನೆಟ್‌ಗೆ ಕಠಿಣ ನಿರ್ಬಂಧ ಹೇರಿದೆ. ಆದರೂ, ಪ್ರತಿಭಟನಕಾರರನ್ನು ಬೆಂಬಲಿಸುತ್ತಿರುವವರು ಪ್ರಾಕ್ಸಿ ಸರ್ವರ್‌ಗಳ ಮೂಲಕ ಪ್ರತಿಭಟನೆಯ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹಿಜಾಬ್‌ ಧರಿಸಲು ನಿರಾಕರಣೆ: ಸಂದರ್ಶನ ರದ್ದು ಮಾಡಿದ ಅಧ್ಯಕ್ಷ
ಹಿಜಾಬ್ ಧರಿಸಲು ನಿರಾಕರಿಸಿದ ಸಿಎನ್‌ಎನ್‌ನ ಪತ್ರಕರ್ತೆಯು ನಡೆಸಬೇಕಿದ್ದ ಸಂದರ್ಶನವನ್ನು ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯಿಸ್‌ ಅವರು ರದ್ದು ಮಾಡಿದ್ದಾರೆ. ಈ ಕುರಿತು ಪತ್ರಕರ್ತೆ ಕ್ರಿಸ್ಟಿಯಾನ್‌ ಅಮನ್‌ಪೋರ್‌ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘ಅಧ್ಯಕ್ಷರ ಕಡೆಯವರು ಬಂದು ಇದು ಮೊಹರಂ ಮತ್ತು ಸಫರ್‌ನ ಪವಿತ್ರ ತಿಂಗಳು. ಆದ್ದರಿಂದ ನೀವು ಹಿಜಾಬ್‌ ಧರಿಸಬೇಕಾಗುತ್ತದೆ ಎಂದು ಸೂಚಿಸಿದರು. ನಾನು ವಿನಯವಾಗಿಯೇ ಇದನ್ನು ನಿರಾಕರಿಸಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, ‘ಇದು ಗೌರವದ ವಿಚಾರವಾಗಿದೆ’ ಎಂದರು. ಹಿಜಾಬ್‌ ಧರಿಸದಿದ್ದರೆ ಸಂದರ್ಶನ ನೀಡುವುದಿಲ್ಲ ಎಂದು ಹೊರನಡೆದರು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಹಿಜಾಬ್‌ ಪರ ಮೆರವಣಿಗೆ
ಮಹಿಳೆಯರಿಗೆ ಇರಾನ್‌ ಸರ್ಕಾರ ವಿಧಿಸಿರುವ ವಸ್ತ್ರಸಂಹಿತೆಯನ್ನು ಬೆಂಬಲಿಸಿ, ಸರ್ಕಾರಿ ಬೆಂಬಲಿತ ಮೆರವಣಿಗೆಗಳು ಟೆಹರಾನ್‌ ಮತ್ತು ಇತರ ನಗರದಲ್ಲಿ ಶುಕ್ರವಾರ ನಡೆಯಿತು. ಮೆರವಣಿಗೆಯಲ್ಲಿ ಪುರುಷರೇ ಸಾವಿರಾರು ಸಂಖ್ಯೆಯಲ್ಲಿದ್ದರು. ಬುರ್ಖಾ ಧರಿಸಿದ ನೂರಾರು ಮಹಿಳೆಯರೂ ಇದ್ದರು ಎಂದು ಇರಾನ್‌ನ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.