ದುಬೈ/ಟೆಹರಾನ್: ಇಸ್ರೇಲ್ ದಾಳಿ ಶುರುವಾದಾಗಿನಿಂದ ಅಜ್ಞಾತ ಸ್ಥಳದಲ್ಲಿ ಇರುವ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ, ತಮ್ಮ ಉತ್ತರಾಧಿಕಾರಿ ಆಯ್ಕೆಗೆ ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ತಮ್ಮನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ಬೆದರಿಕೆ ಒಡ್ಡಿದ ನಂತರ, ಖಮೇನಿ ಅವರು ಉತ್ತರಾಧಿಕಾರಿ ಆಯ್ಕೆ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ, ಇರಾನ್ ಶರಣಾದ ಸಂದರ್ಭದಲ್ಲಿಯೂ ಉತ್ತರಾಧಿಕಾರಿ ಯಾರಾಗಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಕೂಡ ಖಮೇನಿ ಅವರ ಇಂತಹ ಕ್ರಮಕ್ಕೆ ಕಾರಣ ಎನ್ನಲಾಗುತ್ತಿದೆ.
ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ, ಅಲಿರೇಜಾ ಅರಾಫಿ, ಅಲಿ ಅಸ್ಘರ್ ಹೆಜಾಜಿ ಹಾಗೂ ಮೊಹಮ್ಮದ್ ಗೊಲ್ಪಯೇಗನಿ ಅವರ ಹೆಸರುಗಳು ಉತ್ತರಾಧಿಕಾರಿ ಸ್ಥಾನಕ್ಕೆ ಕೇಳಿಬರುತ್ತಿವೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.
ಮೊಜ್ತಬಾ ಅವರೇ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚು. ಸದ್ಯ, ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತವನ್ನೂ ಹೊಂದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಅಲಿರೇಜಾ ಅವರು ಖಮೇನಿ ಅವರ ಅತ್ಯಂತ ನಂಬಿಕಸ್ಥ ವ್ಯಕ್ತಿ. ಅಲಿ ಅಸ್ಘರ್ ಹೆಜಾಜಿ ಅವರು ಖಮೇನಿ ಅವರ ರಾಜಕೀಯ ವ್ಯವಹಾರಗಳ ಮೇಲ್ವಿಚಾರಣೆ ಮಾಡುತ್ತಿದ್ದು, ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಮೊಹಮ್ಮದ್ ಗೊಲ್ಪಯೇಗನಿ ಕೂಡ ಖಮೇನಿ ಅತ್ಯಂತ ನಂಬಿಕಸ್ಥ ವ್ಯಕ್ತಿಯಾಗಿದ್ದು, ಇರಾನ್‌ನ ಆಡಳಿತ ವೈಖರಿ ಮೇಲೆ ಹಿಡಿತ ಹೊಂದಿದವರಾಗಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.