ಫ್ರಾನ್ಸ್‌ನ ಲೆ ಬಾರ್ಗೆಟ್ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಿರುವ ಪ್ಯಾರಿಸ್ ಏರ್ ಶೋದಲ್ಲಿ ಇಸ್ರೇಲ್ ತೆರೆದಿರುವ ಮಳಿಗೆ ಸುತ್ತಲೂ ಕಪ್ಪು ಹಲಗೆ ಅಳವಡಿಸಲಾಗಿತ್ತು
–ರಾಯಿಟರ್ಸ್ ಚಿತ್ರ
ಪ್ಯಾರಿಸ್: ‘55ನೇ ಪ್ಯಾರಿಸ್ ಏರ್ ಶೋ’ನಲ್ಲಿ ಇಸ್ರೇಲ್‌ನ ರಕ್ಷಣಾ ಸಾಮಗ್ರಿಗಳ ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿದ್ದು, ಇದನ್ನು ಇಸ್ರೇಲ್ ರಕ್ಷಣಾ ಸಚಿವಾಲಯ ಖಂಡಿಸಿದೆ. ‘ಇದು ಅತಿರೇಕದ ವರ್ತನೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಐದು ರಕ್ಷಣಾ ಸಂಸ್ಥೆಗಳ ಮಳಿಗೆಗಳ ಸುತ್ತಲೂ ಫ್ರೆಂಚ್ ಅಧಿಕಾರಿಗಳು ಕಪ್ಪು ಹಲಗೆಗಳನ್ನು ಅಳವಡಿಸಿದ್ದಾರೆ.
‘ಅಂತರರಾಷ್ಟ್ರೀಯ ಪ್ರದರ್ಶಕರಿಂದ ಇಸ್ರೇಲ್‌ನ ಮಳಿಗೆಗಳನ್ನು ಪ್ರತ್ಯೇಕಿಸಲಾಗಿದೆ. ಆಕ್ರಮಣಕಾರಿ ಯುದ್ಧ ಸಾಮಗ್ರಿಗಳ ವ್ಯವಸ್ಥೆಯ ಪ್ರದರ್ಶನವನ್ನು ರದ್ದುಗೊಳಿಸಬೇಕು ಎಂದು ಸಂಘಟಕರು ಕೊನೇ ಕ್ಷಣದಲ್ಲಿ ಸೂಚಿಸಿದರು’ ಎಂದು ಇಸ್ರೇಲ್‌ನ ಅಧಿಕಾರಿಗಳು ಆರೋಪಿಸಿದರು.
‘ಇಸ್ರೇಲ್‌ನ ಆಕ್ರಮಣಕಾರಿ ಯುದ್ಧ ಸಾಮಗ್ರಿಗಳು ಮತ್ತು ಫ್ರೆಂಚ್‌ನ ಕಂಪನಿಗಳಿಗೆ ಸ್ಪರ್ಧೆಗಿಳಿಯುವ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪ್ರದರ್ಶನದಿಂದ ಹೊರಗಿಡುವ ಫ್ರೆಂಚ್‌ನ ರಾಜಕೀಯ ಇದರ ಹಿಂದೆ ಅಡಗಿದೆ. ಈ ಕ್ರಮವು ಕೊಳಕು ಮತ್ತು ಅನುಚಿತ’ ಎಂದು ರಕ್ಷಣಾ ಸಚಿವಾಲಯವು ಸೋಮವಾರ ನೀಡಿರುವ ಹೇಳಿಕೆಯಲ್ಲಿ ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.