ADVERTISEMENT

ಗಾಜಾ ಮೇಲೆ ನಿಯಂತ್ರಣ ಸಾಧಿಸುವ ಇಸ್ರೇಲ್‌ ನಿರ್ಧಾರ: ಹಲವು ದೇಶಗಳ ವಿರೋಧ

ರಾಯಿಟರ್ಸ್
Published 9 ಆಗಸ್ಟ್ 2025, 15:03 IST
Last Updated 9 ಆಗಸ್ಟ್ 2025, 15:03 IST
ಉತ್ತರ ಗಾಜಾ ಪಟ್ಟಿಯ ಜಬಾಲಿಯಾದಲ್ಲಿ ಮಿಲಿಟರಿ ವಿಮಾನದಿಂದ ಕೆಳಗೆ ಹಾಕಲಾದ ಪರಿಹಾರ ಸಾಮಗ್ರಿಯನ್ನು ಎತ್ತಿಕೊಳ್ಳಲು ಮುಗಿಬಿದ್ದ ಪ್ಯಾಲೆಸ್ಟೀನಿಯನ್ನರು –ಎಎಫ್‌ಪಿ ಚಿತ್ರ
ಉತ್ತರ ಗಾಜಾ ಪಟ್ಟಿಯ ಜಬಾಲಿಯಾದಲ್ಲಿ ಮಿಲಿಟರಿ ವಿಮಾನದಿಂದ ಕೆಳಗೆ ಹಾಕಲಾದ ಪರಿಹಾರ ಸಾಮಗ್ರಿಯನ್ನು ಎತ್ತಿಕೊಳ್ಳಲು ಮುಗಿಬಿದ್ದ ಪ್ಯಾಲೆಸ್ಟೀನಿಯನ್ನರು –ಎಎಫ್‌ಪಿ ಚಿತ್ರ   

ಕೈರೊ/ ಬರ್ಲಿನ್: ಗಾಜಾ ನಗರವನ್ನು ಸಂಪೂರ್ಣವಾಗಿ ಸೇನೆಯ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಇಸ್ರೇಲ್‌ನ ನಿರ್ಧಾರವನ್ನು ಅರಬ್‌ ಮತ್ತು ಮುಸ್ಲಿಮ್‌ ದೇಶಗಳು ಒಳಗೊಂಡಂತೆ ಹಲವು ದೇಶಗಳು ಖಂಡಿಸಿವೆ.

ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ಸುಮಾರು 20 ದೇಶಗಳು ಈ ಯೋಜನೆಯು ‘ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಶನಿವಾರ ಹೇಳಿವೆ.

ಗಾಜಾ ನಗರವನ್ನು ಸೇನೆಯ ವಶಕ್ಕೆ ತೆಗೆದುಕೊಳ್ಳುವ ಪ್ರಸ್ತಾವಕ್ಕೆ ಇಸ್ರೇಲ್‌ನ ಭದ್ರತಾ ಸಂಪುಟ ಶುಕ್ರವಾರ ಅನುಮೋದನೆ ನೀಡಿತ್ತು. ಆಸ್ಟ್ರೇಲಿಯಾ, ಜರ್ಮನಿ, ಇಟಲಿ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ನ ವಿದೇಶಾಂಗ ಸಚಿವರು ಈ ನಿರ್ಧಾರವನ್ನು ಟೀಕಿಸಿದ್ದಾರೆ.

ADVERTISEMENT

‘ಇಸ್ರೇಲ್ ಸರ್ಕಾರ ಘೋಷಿಸಿರುವ ಯೋಜನೆಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಅಪಾಯ ಹೊಂದಿವೆ’ ಎಂದು ಸಚಿವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತ: ಇಸ್ರೇಲ್‌ ನಿರ್ಧಾರವನ್ನು ಟೀಕಿಸಿರುವ ಜರ್ಮನಿ, ಆ ದೇಶಕ್ಕೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

‘ಗಾಜಾದಲ್ಲಿ ಬಳಸಲು ಸಾಧ್ಯತೆಯಿರುವ ಯಾವುದೇ ಮಿಲಿಟರಿ ಉಪಕರಣಗಳ ರಫ್ತಿಗೆ ಜರ್ಮನಿ ಅನುಮತಿ ನೀಡುವುದಿಲ್ಲ. ಮುಂದಿನ ಸೂಚನೆ ಬರುವವರೆಗೂ ಈ ನಿಲುವು ಜಾರಿಯಲ್ಲಿರಲಿದೆ’ ಎಂದು ಜರ್ಮನಿಯ ಚಾನ್ಸಲರ್‌ ಫ್ರೆಡರಿಕ್ ಮೆರ್ಜ್‌ ಶುಕ್ರವಾರ ಹೇಳಿದ್ದಾರೆ.

ಟರ್ಕಿ ಕರೆ (ಅಂಕಾರ ವರದಿ): ಇಸ್ರೇಲ್ ಯೋಜನೆಯ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಗಳಿಸಬೇಕು ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್ ಫಿದಾನ್ ಶನಿವಾರ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.