ಸಂಗ್ರಹ ಚಿತ್ರ
ಜೆರುಸಲೇಂ : ಗಾಜಾ ನಗರದ ಮೇಲೆ ಸೋಮವಾರ ರಾತ್ರಿಯಿಡೀ ಭಾರಿ ದಾಳಿ ನಡೆಸಿರುವ ಇಸ್ರೇಲ್ ಸೇನೆ, ‘ಹಮಾಸ್ ಸಂಪೂರ್ಣ ನಾಶ’ವಾಗುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದೆ.
ಗಾಜಾ ನಗರದ ದಕ್ಷಿಣ ಭಾಗಕ್ಕೆ ತೆರಳುವಂತೆ ನಿವಾಸಿಗಳಿಗೆ ಸೇನೆಯು ಮಂಗಳವಾರ ಎಚ್ಚರಿಕೆ ನೀಡಿದೆ. ಸೋಮವಾರ ರಾತ್ರಿ ನಡೆಸಿದ ದಾಳಿಯಿಂದ ‘ಗಾಜಾ ಹೊತ್ತಿ ಉರಿಯುತ್ತಿದೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
‘ಹಮಾಸ್‌ನ ಮಿಲಿಟರಿ ಮೂಲಸೌಕರ್ಯ’ ನಾಶ ಮಾಡಲು ವಿಸ್ತೃತ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಅವಿಹಾಯ್ ಅಡ್ರೇಯಿ ಘೋಷಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಸುಮಾರು 2.20 ಲಕ್ಷ ಪ್ಯಾಲೆಸ್ಟೀನಿಯನ್ನರು ಉತ್ತರ ಗಾಜಾವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಇಸ್ರೇಲ್ ಸೇನೆಯು ಗಾಜಾ ನಗರ ತೊರೆಯುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಸುಮಾರು 10 ಲಕ್ಷ ಮಂದಿ ನೆಲಸಿದ್ದರು.
ಸೋಮವಾರ ರಾತ್ರಿಯಿಂದೀಚೆ ಗಾಜಾದಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಗಾಜಾದ ಪಶ್ಚಿಮ ಭಾಗದ ಜನವಸತಿ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ 20 ಮಂದಿಯ ಮೃತದೇಹಗಳನ್ನು ತರಲಾಗಿದೆ ಎಂದು ಶಿಫಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಾಂಬ್ ದಾಳಿಯಲ್ಲಿ 90 ಮಂದಿ ಗಾಯಗೊಂಡಿದ್ಧಾರೆ.
‘ಗಾಜಾದ ಜನರಿಗೆ ಸೋಮವಾರ ರಾತ್ರಿ ದುರಂತಮಯವಾಗಿತ್ತು. ಒಂದೇ ಒಂದು ಕ್ಷಣ ಬಿಡುವು ನೀಡದೆ ಬಾಂಬ್ ದಾಳಿ ನಡೆಸಲಾಗಿದೆ. ಕಟ್ಟಡಗಳ ಅವಶೇಷಗಳಡಿ ಹಲವು ಮೃತದೇಹಗಳು ಇವೆ’ ಎಂದು ಶಿಫಾ ಆಸ್ಪತ್ರೆಯ ನಿರ್ದೇಶಕ ಡಾ.ಮೊಹಮ್ಮದ್ ಅಬು ಸೆಲ್ಮಿಯಾ ತಿಳಿಸಿದ್ದಾರೆ.
ಈಜಿಪ್ಟ್ ಕಿಡಿ ಇಸ್ರೇಲ್ ಜೊತೆ ದಶಕಗಳ ಹಿಂದೆಯೇ ಶಾಂತಿ ಒಪ್ಪಂದ ಮಾಡಿಕೊಂಡಿರುವ ಮತ್ತು ಗಾಜಾ ಯುದ್ಧ ನಿಲ್ಲಿಸಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಈಜಿಪ್ಟ್ ಇದೀಗ ಇಸ್ರೇಲ್ ಜೊತೆ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದೆ. ಕತಾರ್‌ನಲ್ಲಿ ಸೋಮವಾರ ನಡೆದ ಅರಬ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅವರು ಇಸ್ರೇಲ್ ಅನ್ನು ‘ಶತ್ರು’ ಎಂದು ಕರೆದಿದ್ದಾರೆ. 1979ರಲ್ಲಿ ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧ ಆರಂಭವಾದ ನಂತರ ಈಜಿಪ್ಟ್ ನಾಯಕರೊಬ್ಬರು ಈ ಪದವನ್ನು ಬಳಸಿದ್ದು ಇದೇ ಮೊದಲು ಎಂದು ಈಜಿಪ್ಟ್ ಸರ್ಕಾರದ ಮಾಹಿತಿ ವಿಭಾಗದ ಮುಖ್ಯಸ್ಥರಾದ ದಿಯಾ ರಶ್ವಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.