ಗಾಜಾ ಪಟ್ಟಿಯಲ್ಲಿ ಹಾದುಹೋದ ಇಸ್ರೇಲ್ ಯುದ್ಧ ಟ್ಯಾಂಕ್–
ಪಿಟಿಐ ಚಿತ್ರ
ಟೆಲ್ ಅವೀವ್: ಪ್ಯಾಲೆಸ್ಟೀನ್‌ನ ಗಾಜಾಪಟ್ಟಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯಲು ಇಸ್ರೇಲ್‌ನ ಭದ್ರತೆ ಕುರಿತಾದ ಸಂಪುಟವು ಸೋಮವಾರ ಒಪ್ಪಿಗೆ ನೀಡಿದೆ. ಸಾವಿರಾರು ಮೀಸಲು ಸೈನಿಕರನ್ನು ಗಾಜಾದತ್ತ ಹೊರಡುವಂತೆ ಸೇನಾ ಮುಖ್ಯಸ್ಥರು ಆದೇಶ ಹೊರಡಿಸಿದ್ದಾರೆ. ಆದರೆ, ಈ ಯೋಜನೆ ಯಾವಾಗ ಜಾರಿಯಾಗಲಿದೆ ಎಂಬುದನ್ನು ಖಚಿತಪಡಿಸಿಲ್ಲ.
ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಇಸ್ರೇಲ್ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಈ ಯೋಜನೆಯಡಿಯಲ್ಲಿ ಲಕ್ಷಾಂತರ ಪ್ಯಾಲೆಸ್ಟೀನಿಯನ್ನರನ್ನು ದಕ್ಷಿಣ ಗಾಜಾಕ್ಕೆ ಸ್ಥಳಾಂತರಿಸುವುದು ಸಹ ಸೇರಿದೆ ಎಂದು ಇಸ್ರೇಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದ, ಈಗಾಗಲೇ ಭೀಕರವಾಗಿರುವ ಮಾನವೀಯ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಗಾಜಾಪಟ್ಟಿಯನ್ನು ಹಮಾಸ್ ಬಂಡುಕೋರರಿಂದ ಸಂಪೂರ್ಣವಾಗಿ ಮುಕ್ತಗೊಳಿಸುವ ನಿಟ್ಟಿನಲ್ಲಿ ಇಸ್ರೇಲ್ ಹೊಸ ಯೋಜನೆ ಕೈಗೆತ್ತಿಕೊಂಡಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ವಿರಾಮವು ಮಾರ್ಚ್ ಮಧ್ಯಭಾಗದಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ, ದಾಳಿ ತೀವ್ರಗೊಳಿಸಿದ ಇಸ್ರೇಲ್, ಗಾಜಾಪಟ್ಟಿಯ ಶೇಕಡಾ 50ರಷ್ಟು ಭಾಗವನ್ನು ತನ್ನ ವಶಕ್ಕೆ ಪಡೆದಿತ್ತು. ಕದನ ವಿರಾಮ ಮುಗಿಯುವ ಮೊದಲು ಗಾಜಾ ಪಟ್ಟಿಗೆ ಪೂರೈಕೆಯಾಗುತ್ತಿದ್ದ ನೀರು, ಆಹಾರ, ಇಂಧನವನ್ನು ಸ್ಥಗಿತಗೊಳಿಸಿತ್ತು. ಕಳೆದ 19 ತಿಂಗಳಿನಿಂದ ನಡೆಯುತ್ತಿದ್ದ ಯುದ್ಧದ ಸಂದರ್ಭದಲ್ಲಿ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟು ಸೃಷ್ಟಿಸಿದೆ. ನೆರವು ಸ್ಥಗಿತಗೊಳಿಸಿದ್ದರಿದ ಆಹಾರ ಕೊರತೆಯುಂಟಾಗಿ, ಜನರು ಲೂಟಿಗೆ ಇಳಿಯುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.