ಇಸ್ರೇಲ್ ಇರಾನ್ ಧ್ವಜ
ಜೆರುಸಲೇಂ: ಈ ಹಿಂದೆ ಸ್ವೀಕರಿಸಿದ್ದ ಶವಗಳಲ್ಲಿ ಒಂದು ಒತ್ತೆಯಾಳಿನದ್ದಲ್ಲ ಎಂದು ಹೇಳಿದ ಒಂದು ಗಂಟೆಯ ನಂತರ ಮತ್ತೆ ಎರಡು ಮೃತದೇಹಗಳನ್ನು ಇಸ್ರೇಲ್ ಬುಧವಾರ ಸ್ವೀಕರಿಸಿದೆ. ಹಮಾಸ್ ಬಂಡುಕೋರರು ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಮೃತದೇಹಗಳನ್ನು ವರ್ಗಾಯಿಸಿದ್ದಾರೆ.
ಎರಡು ಶವಪೆಟ್ಟಿಗೆಗಳು ಇಸ್ರೇಲ್‌ಗೆ ತಲುಪಿದ ನಂತರ ಹೇಳಿಕೆ ನೀಡಿರುವ ಸೇನೆ, ಒತ್ತೆಯಾಳುಗಳ ಗುರುತುಗಳನ್ನು ಇನ್ನಷ್ಟೆ ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದೆ.
ಈ ಮಧ್ಯೆ, ಕದನ ವಿರಾಮ ಒಪ್ಪಂದ ಅನುಷ್ಠಾನದ ಮತ್ತೊಂದು ಹೆಜ್ಜೆಯಾಗಿ ಇಸ್ರೇಲ್‌ನಿಂದ 45 ಪ್ಯಾಲೆಸ್ಟೀನಿಯರ ಶವಗಳನ್ನು ಸ್ವೀಕರಿಸಿರುವುದಾಗಿ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಿಂದಾಗಿ ಸಮಾಧಿ ಮಾಡಲು ಗಾಜಾಗೆ ಹಿಂತಿರುಗಿಸಲಾದ ಒಟ್ಟು ಶವಗಳ ಸಂಖ್ಯೆ 90ಕ್ಕೆ ಏರಿದೆ. ಮೃತದೇಹಗಳನ್ನು ಪರೀಕ್ಷಿಸಿದ ವಿಧಿವಿಜ್ಞಾನ ತಂಡವು ಅವುಗಳಲ್ಲಿ ದೌರ್ಜನ್ಯದ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಿದೆ.
ಸೋಮವಾರ ಗಾಜಾದಿಂದ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಒಂದು ಗಂಟೆಗಳ ನಂತರ ನಾಲ್ಕು ಒತ್ತೆಯಾಳುಗಳ ಮೃತದೇಹವನ್ನು ಹಮಾಸ್ ಹಸ್ತಾಂತರಿಸಿತ್ತು. ಅದಾಗಿ, ಮಂಗಳವಾರ ಮತ್ತೆ ನಾಲ್ಕು ಒತ್ತೆಯಾಳುಗಳ ಮೃತದೇಹಗಳನ್ನು ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಗಿದೆ.
ಅವುಗಳಲ್ಲಿ ನಾಲ್ಕನೇ ಮೃತದೇಹವು ಯಾವುದೇ ಒತ್ತೆಯಾಳುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ವಿಧಿವಿಜ್ಞಾನ ವರದಿ ಹೇಳಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಒಟ್ಟು 28 ಮೃತದೇಹಗಳಿಗಾಗಿ ಇಸ್ರೇಲ್ ಕಾಯುತ್ತಿದೆ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 2000 ಪ್ಯಾಲೆಸ್ಟೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.