ದುಬೈ/ ಟೆಹರಾನ್ (ಎಪಿ/ಎಎಫ್‌ಪಿ): ಇಸ್ರೇಲ್‌ನ ಇಂಟೆಲಿಜೆನ್ಸ್ ಏಜೆನ್ಸಿ ಮೊಸಾದ್, ಶುಕ್ರವಾರದ ದಾಳಿಗೆ ಮುಂಚಿತವಾಗಿ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿತ್ತು ಎಂದು ಭದ್ರತಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರಗಳನ್ನು ಬಳಸಿ ಇರಾನ್‌ನ ನೆಲದಿಂದಲೇ ಆ ದೇಶದ ಸೇನಾ ನೆಲೆಗಳು ಮತ್ತು ಸೇನೆಯ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟಕಗಳನ್ನು ಹೊಂದಿರುವ ಡ್ರೋನ್‌ಗಳನ್ನು ಹಾರಿಸಲು ಇರಾನ್‌ನ ನೆಲದಲ್ಲೇ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಶಸ್ತ್ರಾಸ್ತ್ರಗಳನ್ನೂ ಸಾಗಿಸಿ, ಅವುಗಳನ್ನು ವಾಹನಗಳಿಂದ ಹಾರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಶುಕ್ರವಾರದ ವೈಮಾನಿಕ ದಾಳಿಯ ವೇಳೆ ಈ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಯಿತು. ಕ್ಷಿಪಣಿ ಲಾಂಚರ್‌ಗಳು ಮತ್ತು ನೆಲದಿಂದ ಆಗಸಕ್ಕೆ ಕ್ಷಿಪಣಿ ಹಾರಿಸುವ ವ್ಯವಸ್ಥೆಯನ್ನು ಇರಾನ್‌ನ ನೆಲದಿಂದಲೇ ಧ್ವಂಸಗೊಳಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದಾಳಿಯ ವೇಳೆ ಇಸ್ರೇಲ್‌ನ ಯುದ್ಧ ವಿಮಾನಗಳು ಇರಾನ್‌ನ ವಾಯು ಪ್ರದೇಶವನ್ನು ಪ್ರವೇಶಿಸಿತ್ತೇ ಅಥವಾ ನೆರೆಯ ದೇಶದ ವಾಯುಪ್ರದೇಶದಿಂದಲೇ ಕ್ಷಿಪಣಿ ಪ್ರಯೋಗಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ದಾಳಿ ಸಂದರ್ಭದಲ್ಲಿ ಯುದ್ದ ವಿಮಾನಗಳ ಹಾರಾಟದ ಸದ್ದು ಕೇಳಿಸಿದೆ ಎಂದು ಇರಾಕ್‌ನ ಜನರು ತಿಳಿಸಿದ್ದಾರೆ. ಇಸ್ರೇಲ್ ಈ ಹಿಂದೆ ಇರಾಕ್‌ನ ವಾಯುಪ್ರದೇಶದಿಂದ ಇರಾನ್ ಮೇಲೆ ದಾಳಿ ನಡೆಸಿತ್ತು.
ದಾಳಿಯಲ್ಲಿ ಪಾತ್ರವಿಲ್ಲ: ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಅಮೆರಿಕ, ತನ್ನ ಹಿತಾಸಕ್ತಿಗಳ ಮೇಲೆ ದಾಳಿ ಮಾಡದಂತೆ ಇರಾನ್‌ಗೆ ಎಚ್ಚರಿಕೆ ನೀಡಿದೆ. ಆದರೆ ಈ ದಾಳಿಗೆ ಅಮೆರಿಕ ಕೂಡಾ ‘ಹೊಣೆಗಾರ’ ಎಂದಿರುವ ಇರಾನ್, ‘ಅಮೆರಿಕದ ನೆರವು ಮತ್ತು ಅನುಮತಿಯಿಲ್ಲದೆ ಇಸ್ರೇಲ್ ಈ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
ಹೊಸ ಮುಖ್ಯಸ್ಥರ ನೇಮಕ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ದಾಳಿಯಿಂದ ಮೃತಪಟ್ಟ ಸೇನಾಧಿಕಾರಿಗಳ ಸ್ಥಾನಗಳಿಗೆ ತಕ್ಷಣವೇ ಹೊಸಬರನ್ನು ನೇಮಿಸಿದ್ದಾರೆ.
ಮೊಹಮ್ಮದ್ ಪಕ್ಪೂರ್ ಅವರನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಕಮಾಂಡರ್ ಆಗಿಯೂ, ಅಬ್ದುಲ್‌ರಹೀಮ್ ಮೌಸವಿ ಅವರನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿಯೂ ಶುಕ್ರವಾರ ನೇಮಕ ಮಾಡಿದ್ದಾರೆ.
ಯಶಸ್ವಿ ದಾಳಿ: ನೆತನ್ಯಾಹು
ಜೆರುಸಲೇಂ (ಪಿಟಿಐ): ಇರಾನ್ ಸೇನೆಯ ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಕಾರ್ಯಾಚರಣೆಯನ್ನು ‘ಅತ್ಯಂತ ಯಶಸ್ವಿ ಆರಂಭಿಕ ದಾಳಿ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಬಣ್ಣಿಸಿದ್ದಾರೆ. ‘ನಮ್ಮ ಆರಂಭಿಕ ದಾಳಿ ಯಶಸ್ವಿಯಾಗಿದೆ. ದೇವರ ದಯೆಯಿಂದ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲಿದ್ದೇವೆ’ ಎಂದು ನೆತನ್ಯಾಹು ಹೇಳಿದರು. ‘ಇರಾನ್‌ನ ಪರಮಾಣು ಕಾರ್ಯಕ್ರಮಗಳ ಪ್ರಮುಖ ಕೇಂದ್ರವನ್ನು ಹೊಡೆದಿದ್ದೇವೆ. ನಟಾನ್ಜ್‌ನಲ್ಲಿರುವ ಘಟಕ ಮತ್ತು ಇರಾನ್‌ನ ಅಣ್ವಸ್ತ್ರ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ವಿಜ್ಞಾನಿಗಳನ್ನು ಗುರಿಯಾಗಿಸಿದ್ದೇವೆ. ಇರಾನ್‌ನ ಗುರಿ ನಿರ್ದೇಶಿತ ಕ್ಷಿಪಣಿ ಕಾರ್ಯಕ್ರಮದ ಹೃದಯಭಾಗಕ್ಕೂ ಹೊಡೆದಿದ್ದೇವೆ’ ಎಂದು ನೆತನ್ಯಾಹು ಹೇಳಿದ್ದಾರೆ.
ಮೋದಿಗೆ ಕರೆ ಮಾಡಿದ ಇಸ್ರೇಲ್ ಪ್ರಧಾನಿ
ಇರಾನ್ ವಿರುದ್ಧದ ದಾಳಿಗೆ ಅಂತರರಾಷ್ಟ್ರೀಯ ಬೆಂಬಲವನ್ನು ಗಿಟ್ಟಿಸುವ ಪ್ರಯತ್ನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಶ್ವದ ವಿವಿಧ ದೇಶಗಳ ನಾಯಕರ ಜತೆ ಮಾತನಾಡಿದ್ದಾರೆ ಎಂದು ಅವರ ಕಚೇರಿ ಶುಕ್ರವಾರ ತಿಳಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಜತೆ ಮಾತನಾಡಲಿದ್ದಾರೆ ಎಂದು ಕಚೇರಿಯ ಪ್ರಕಟಣೆ ತಿಳಿಸಿದೆ.
ಒಪ್ಪಂದ ಮಾಡಿಕೊಳ್ಳಿ: ಟ್ರಂಪ್ ಒತ್ತಾಯ
ಇಸ್ರೇಲ್‌ನಿಂದ ಇನ್ನಷ್ಟು ದಾಳಿ ಎದುರಿಸುವುದನ್ನು ತಪ್ಪಿಸಲು ತನ್ನ ಪರಮಾಣು ಕಾರ್ಯಕ್ರಮದ ಕುರಿತು ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಅನ್ನು ಒತ್ತಾಯಿಸಿದ್ದಾರೆ. ‘ಈಗಾಗಲೇ ಸಾಕಷ್ಟು ಸಾವು ಮತ್ತು ಹಾನಿ ಸಂಭವಿಸಿದೆ. ಇಸ್ರೇಲ್‌ನ ಮುಂದಿನ ದಾಳಿ ಇನ್ನಷ್ಟು ಕ್ರೂರವಾಗಿರಲಿದೆ. ಒಪ್ಪಂದಕ್ಕೆ ಬರದಿದ್ದರೆ ಇರಾನ್‌ಗೆ ಉಳಿಗಾಲವಿಲ್ಲ’ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.