ಗಾಜಾದಲ್ಲಿ ಇಸ್ರೇಲ್ ದಾಳಿ
–ರಾಯಿಟರ್ಸ್ ಚಿತ್ರ
ದೀರ್ ಅಲ್–ಬಲಾಹ್: ಇಸ್ರೇಲ್ ಸೇನೆಯು ಗಾಜಾದ ಮೇಲೆ ಬುಧವಾರ ಬೆಳಗಿನ ಜಾವ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಕ್ಕಳು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಹಮಾಸ್ ಬಂಡುಕೋರರು ಇಸ್ರೇಲ್–ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ.
ಟ್ರಂಪ್ ಅವರು ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಗಾಜಾಕ್ಕೆ ಮಾನವೀಯ ನೆರವು ಮುಂದುವರಿಸುವ ಅಥವಾ ಕದನ ವಿರಾಮಕ್ಕೆ ಒಪ್ಪಂದ ಏರ್ಪಡಬಹುದು ಎಂಬ ಭರವಸೆಯ ನಡುವೆಯೇ, ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ದಾಳಿಯ ಕುರಿತು ಹೇಳಿಕೆ ನೀಡಲು ಇಸ್ರೇಲ್ ಸೇನೆ ನಿರಾಕರಿಸಿದೆ. ಆದರೆ, ಜಬಲಿಯಾ ಪ್ರದೇಶದಲ್ಲಿರುವ ಹಮಾಸ್ ಬಂಡುಕೋರರ ಮೂಲ ಸೌಕರ್ಯಗಳನ್ನು ನಾಶ ಮಾಡಲು ರಾಕೆಟ್ ಸೇರಿದಂತೆ ಇನ್ನಿತರ ದಾಳಿ ನಡೆಸಲಾಗುವುದು. ಹೀಗಾಗಿ, ಈ ಪ್ರದೇಶದಲ್ಲಿರುವ ಜನರು ಬೇರೆ ಕಡೆ ತೆರಳಬೇಕು ಎಂದು ಮಂಗಳವಾರ ರಾತ್ರಿ ಎಚ್ಚರಿಕೆ ನೀಡಿತ್ತು.
ಜಬಲಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಕಾರ್ಯಕರ್ತರು, ಕಾಂಕ್ರೀಟ್ ಗೋಡೆಗಳ ಮಧ್ಯೆ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯಲು ಹರಸಾಹಸಪಡುತ್ತಿದ್ದ ದೃಶ್ಯವು ಮನಕಲಕುವಂತಿತ್ತು.
ಗಾಜಾ ಮೇಲಿನ ದಾಳಿಯನ್ನು ಇಸ್ರೇಲ್ ನಿಲ್ಲಿಸಲು ‘ದಾರಿ ಇಲ್ಲ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಂಗಳವಾರವಷ್ಟೇ ಹೇಳಿದ್ದರು. ಇದರಿಂದ ಕದನ ವಿರಾಮದ ಭರವಸೆಯು ಮಂಕಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.