ADVERTISEMENT

ನ್ಯಾಯಾಂಗ ವ್ಯವಸ್ಥೆಯ ಬದಲಾವಣೆ- ಇಸ್ರೇಲ್‌ ಪ್ರಧಾನಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 14:43 IST
Last Updated 27 ಮಾರ್ಚ್ 2023, 14:43 IST
ನ್ಯಾಯಾಂಗ ವ್ಯವಸ್ಥೆ ಬದಲಾವಣೆ ನಿರ್ಧಾರ ಕೈಬಿಡಲು ಸಲಹೆ ಮಾಡಿದ್ದ ರಕ್ಷಣಾ ಸಚಿವರನ್ನು ವಜಾ ಮಾಡಿದ್ದ ಇಸ್ರೇಲ್ ಪ್ರಧಾನಿ ವಿರುದ್ಧ ಪ್ರತಿಭಟಿಸಲು ಜೆರುಸಲೆಂನಲ್ಲಿ ಸೇರಿದ್ದ ಜನಸಮೂಹ –ಎಎಫ್‌ಪಿ ಚಿತ್ರ
ನ್ಯಾಯಾಂಗ ವ್ಯವಸ್ಥೆ ಬದಲಾವಣೆ ನಿರ್ಧಾರ ಕೈಬಿಡಲು ಸಲಹೆ ಮಾಡಿದ್ದ ರಕ್ಷಣಾ ಸಚಿವರನ್ನು ವಜಾ ಮಾಡಿದ್ದ ಇಸ್ರೇಲ್ ಪ್ರಧಾನಿ ವಿರುದ್ಧ ಪ್ರತಿಭಟಿಸಲು ಜೆರುಸಲೆಂನಲ್ಲಿ ಸೇರಿದ್ದ ಜನಸಮೂಹ –ಎಎಫ್‌ಪಿ ಚಿತ್ರ   

ಜೆರುಸಲೆಂ (ಎ.ಪಿ): ‘ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ನಿರ್ಧಾರವನ್ನು ತಕ್ಷಣದಿಂದ ಕೈಬಿಡಬೇಕು‘ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರಿಗೆ ಅಧ್ಯಕ್ಷ ಐಸಾಕ್‌ ಹೆರ್ಜೋಗ್ ಸೂಚಿಸಿದ್ದಾರೆ.

ನಿರ್ಧಾರ ಕೈಬಿಡುವಂತೆ ಈ ಮೊದಲು ಸಲಹೆ ಮಾಡಿದ್ದ ರಕ್ಷಣಾ ಸಚಿವ ಯೋವ್‌ ಗಲಾಂಟ್ ಅವರನ್ನು ಪ್ರಧಾನಿ ಸಂಪುಟದಿಂದ ವಜಾ ಮಾಡಿದ್ದರು. ಪ್ರಧಾನಿಯವರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಪ್ರತಿಭಟನೆಯು ತೀವ್ರಗೊಂಡಂತೆ ಅಧ್ಯಕ್ಷರ ಸೂಚನೆಯು ಹೊರಬಿದ್ದಿದೆ.

ಪ್ರತಿಭಟನೆ, ಧರಣಿ ಹಿನ್ನೆಲೆಯಲ್ಲಿ ಇಸ್ರೇಲ್‌ನಾದ್ಯಂತ ಗೊಂದಲದ ಸ್ಥಿತಿ ಇದೆ. ಹೀಗಾಗಿ, ನ್ಯಾಯಾಂಗ ವ್ಯವಸ್ಥೆಯನ್ನು ಬದಲಿಸುವ ಕ್ರಮಗಳನ್ನು ತಾತ್ಕಾಲಿಕವಾಗಿ ಕೈಬಿಡಬೇಕು ಎಂದು ರಕ್ಷಣಾ ಸಚಿವರು ಕೋರಿದ್ದರು. ಇದರ ಹಿಂದೆಯೇ ಅವರ ವಜಾ ಆದೇಶ ಹೊರಬಿದ್ದಿತ್ತು.

ADVERTISEMENT

ಜನರು ಈಗಾಗಲೇ ನ್ಯಾಯಾಂಗ ವ್ಯವಸ್ಥೆ ಬದಲಿಸುವ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವರ ವಜಾ ಕ್ರಮದ ಬಳಿಕ ಆಕ್ರೋಶ ಇನ್ನಷ್ಟು ಭುಗಿಲೆದ್ದಿದೆ. ಪ್ರಧಾನಿ ನಿಲುವಿಗೆ ಉದ್ಯಮ, ಕಾನೂನು ಕ್ಷೇತ್ರ ಹಾಗೂ ಸೇನೆಯ ಪ್ರಮುಖರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ: ಪ್ರಧಾನಿ ನೇತನ್ಯಾಹು ವಿರುದ್ಧ ಸಹಸ್ರಾರು ಜನರು ಬೀದಿಗಿಳಿದಿದ್ದು, ಟೆಲ್‌ ಅವಿವ್‌ನಲ್ಲಿ ಹೆದ್ದಾರಿಯನ್ನು ಅಡ್ಡಗಟ್ಟಿದ್ದರು. ಜೆರುಸಲೆಂನಲ್ಲಿ ಪ್ರಧಾನಿ ಖಾಸಗಿ ನಿವಾಸದ ಬಳಿ ಸೇರಿದ್ದ ಗುಂಪನ್ನು ಪೊಲೀಸರು ಚದುರಿಸಿದರು.

ಟೆಲ್‌ಅವೀವ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಸಾವಿರಾರು ಜನ ಸೇರಿದ್ದು, ಇಸ್ರೇಲ್‌ನ ಧ್ವಜಗಳು ರಾರಾಜಿಸುತ್ತಿದ್ದವು. ಬೀರ್ಶೆಬಾ, ಹೈಫಾ, ಜೆರುಸಲೆಂನಲ್ಲಿಯೂ ಇಂತಹುದೇ ಚಿತ್ರವಿತ್ತು. ಪೊಲೀಸರು ಗುಂಪು ಚದುರಿಸಲು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರು.

ರಕ್ಷಣಾ ಸಚಿವರ ವಜಾ ಕುರಿತು ಪ್ರಧಾನಿಕಚೇರಿ ಟ್ವೀಟ್ ಮಾಡಿದೆ. ಅದರ ಹಿಂದೆಯೇ ‘ನಿರಾಕರಣೆಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ’ ಎಂದು ಪ್ರಧಾನಿ ನೇತನ್ಯಾಹು ಅವರು ಪ್ರತ್ಯೇಕವಾಗಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.