ADVERTISEMENT

ರಫಾ: ಇಸ್ರೇಲ್‌ ವಾಯುದಾಳಿಗೆ 14 ಮಕ್ಕಳು ಸೇರಿ 18 ಸಾವು

ಏಜೆನ್ಸೀಸ್
Published 21 ಏಪ್ರಿಲ್ 2024, 16:02 IST
Last Updated 21 ಏಪ್ರಿಲ್ 2024, 16:02 IST
<div class="paragraphs"><p>ರಫಾ ನಗರದ ಮೇಲೆ ಇಸ್ರೇಲ್‌ನ ಸೇನೆಯು ಶನಿವಾರ ರಾತ್ರಿ ನಡೆಸಿದ ವಾಯುದಾಳಿಯಲ್ಲಿ ಕಟ್ಟಡವೊಂದು ಸಂಪೂರ್ಣವಾಗಿ ನೆಲಸಮವಾಗಿರುವುದು </p></div>

ರಫಾ ನಗರದ ಮೇಲೆ ಇಸ್ರೇಲ್‌ನ ಸೇನೆಯು ಶನಿವಾರ ರಾತ್ರಿ ನಡೆಸಿದ ವಾಯುದಾಳಿಯಲ್ಲಿ ಕಟ್ಟಡವೊಂದು ಸಂಪೂರ್ಣವಾಗಿ ನೆಲಸಮವಾಗಿರುವುದು

   

ರಫಾ, ಗಾಜಾ ಪಟ್ಟಿ: ಗಾಜಾ ನಗರದ ದಕ್ಷಿಣ ಪ್ರಾಂತ್ಯವನ್ನು ಗುರಿಯಾಗಿಸಿ ಇಸ್ರೇಲ್‌ನ ಸೇನೆ ಶನಿವಾರ ರಾತ್ರಿ ಬಾಂಬ್‌ ದಾಳಿ ನಡೆಸಿದೆ. 14 ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದಾರೆ.

ಇಸ್ರೇಲ್‌ ಸೇನೆಯು ಬಹುತೇಕ ನಿತ್ಯವೂ ರಫಾ ನಗರವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇಲ್ಲಿ ಗಾಜಾ ನಗರದ ಸುಮಾರು 23 ಲಕ್ಷ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾಳಿಯಿಂದ ಹಿಂದೆ ಸರಿಯಬೇಕು ಎಂಬ ಅಂತರರಾಷ್ಟ್ರೀಯ ಮಟ್ಟದ ಒತ್ತಡದ ನಡುವೆಯೂ ಇಸ್ರೇಲ್‌ನ ಸೇನೆ ದಾಳಿ ಮುಂದುವರಿಸಿದ್ದು, ಈಗ ಈಜಿಪ್ಟ್‌ಗೆ ಗಡಿಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. 

ಆಸ್ಪತ್ರೆಯ ಮೂಲಗಳ ಪ್ರಕಾರ, ಮೊದಲು ನಡೆದ ದಾಳಿಯಲ್ಲಿ ವ್ಯಕ್ತಿ, ಆತನ ಪತ್ನಿ, 3 ವರ್ಷದ ಮಗ ಮೃತಪಟ್ಟರು. ಮಹಿಳೆ ಗರ್ಭಿಣಿಯಾಗಿದ್ದು, ಶಿಶುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಹಿಂದೆಯೇ ನಡೆದ ಮತ್ತೊಂದು ದಾಳಿಯಲ್ಲಿ ಒಂದೇ ಕುಟುಂಬದ 13 ಮಕ್ಕಳು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟರು ಎಂದು ಮೂಲಗಳು ವಿವರಿಸಿವೆ. ಅದಕ್ಕೂ ಹಿಂದಿನ ರಾತ್ರಿ ನಡೆದಿದ್ದ ವಾಯುದಾಳಿಯಲ್ಲಿ ಆರು ಮಂದಿ ಮಕ್ಕಳು ಸೇರಿ 9 ಜನರು ಮೃತಪಟ್ಟಿದ್ದರು.

ಇಸ್ರೇಲ್‌–ಹಮಾಸ್‌ ಸಂಘರ್ಷ ಆರಂಭವಾಗಿ ಏಳಕ್ಕೂ ಹೆಚ್ಚು ತಿಂಗಳಾಗಿದೆ. ಇದು, ಇಲ್ಲಿ ಬಿಗುವಿನ ಸ್ಥಿತಿಗೆ ಕಾರಣವಾಗಿದೆ. ಸಂಘರ್ಷದಿಂದಾಗಿ ಈವರೆಗೆ ಸುಮಾರು 34 ಸಾವಿರ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. ಗಾಜಾ ನಗರದ ಶೇ 80ರಷ್ಟು ಜನರು ಮನೆಬಿಟ್ಟು ಸುರಕ್ಷಿತ ಸ್ಥಳಗಳತ್ತ ವಲಸೆ ಹೋಗಿದ್ದಾರೆ.

ಅಮೆರಿಕ ನೆರವು: ಈ ಮಧ್ಯೆ, ಇಸ್ರೇಲ್‌ಗೆ ಸುಮಾರು ₹ 216 ಕೋಟಿ ಮೌಲ್ಯದ ನೆರವು ನೀಡುವ ಪ್ರಸ್ತಾವಕ್ಕೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.