ADVERTISEMENT

ಮಾಣಿಗೆ ದೊರೆತ ಇಸ್ರೇಲ್‌ನ ಶಸ್ತ್ರಾಸ್ತ್ರ ಒಪ್ಪಂದ ದಾಖಲೆಗಳು!

ರಾಯಭಾರ ಕಚೇರಿಗೆ ತಲುಪಿಸುವಲ್ಲಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:21 IST
Last Updated 3 ಏಪ್ರಿಲ್ 2019, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೆರುಸಲೆಂ: ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ನೇತೃತ್ವದ ನಿಯೋಗ ಕಳೆದುಕೊಂಡಿದ್ದ ಮಹತ್ವದ ವರ್ಗೀಕೃತ ದಾಖಲೆಗಳು ಅದೃಷ್ಟವಷಾತ್‌ ರೆಸ್ಟೋರೆಂಟ್‌ನ ಮಾಣಿಯೊಬ್ಬರ ಸಮಯಪ್ರಜ್ಞೆಯಿಂದ ಮತ್ತೆ ದೊರೆತಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಮೀರ್‌ ಬೇನ್‌ ಶಬ್ಬಾತ್‌ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರ ಜತೆ ಇದೇ ವರ್ಷ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌ ಜತೆ ಮಾತುಕತೆ ನಡೆಸಿದ್ದರು.

ಈ ಮಾತುಕತೆ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ವಿವಿಧ ಶಸ್ತ್ರಾಸ್ತ್ರಗಳ ಒಪ್ಪಂದ ಕುರಿತು ಸಮಾಲೋಚನೆ ನಡೆಸಲಾಗಿತ್ತು. ಬೇಹುಗಾರಿಕೆ ವಿಮಾನಗಳು, ಮಾನವರಹಿತ ಯುದ್ಧ ವಿಮಾನಗಳು, ಟ್ಯಾಂಕ್‌ ನಿಗ್ರಹಿಸುವ ಕ್ಷಿಪಣಿಗಳು, ರಾಡಾರ್‌ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಮಾರಾಟ ಮಾಡಲು ಇಸ್ರೇಲ್‌ ಇಚ್ಛೆ ವ್ಯಕ್ತಪಡಿಸಿತ್ತು.

ADVERTISEMENT

ಶಸ್ತ್ರಾಸ್ತ್ರ ಒಪ್ಪಂದ ಕುರಿತಾದ ಹಲವು ದಾಖಲೆಗಳನ್ನು ‌ಶಬ್ಬಾತ್‌ ಅವರ ಆಪ್ತ ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಮುದ್ರಿತ ಪ್ರತಿಗಳನ್ನು ಪಡೆದುಕೊಂಡಿದ್ದರು. ವಿಮಾನ ಹತ್ತುವ ಮುನ್ನ ಇಸ್ರೇಲ್‌ ನಿಯೋಗದ ಸದಸ್ಯರು ರೆಸ್ಟೋರೆಂಟ್‌ನಲ್ಲಿ ಭೋಜನ ಮಾಡಿದ್ದರು. ಆದರೆ, ದಾಖಲೆಗಳ ಪ್ರತಿಗಳಿರುವ ಕಡತವನ್ನು ಶಬ್ಬಾತ್‌ ಅವರ ಆಪ್ತ ಅಲ್ಲಿಯೇ ಬಿಟ್ಟು ಹೊರಟರು ಎನ್ನಲಾಗಿದೆ.

ರೆಸ್ಟೋರೆಂಟ್‌ನಲ್ಲಿನ ಮಾಣಿಯೊಬ್ಬರ ಕೈಗೆ ಈ ದಾಖಲೆಗಳು ದೊರೆತವು. ತಕ್ಷಣವೇ ಈ ವಿಷಯನ್ನು ತನ್ನ ಸ್ನೇಹಿತನ ಗಮನಕ್ಕೆ ತಂದರು. ಸ್ನೇಹಿತನ ತಾಯಿಯು ಭಾರತದಲ್ಲಿನ ಇಸ್ರೇಲಿ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮಾಣಿಯ ಸ್ನೇಹಿತ ಭಾರತಕ್ಕೆ ತೆರಳಿ ದಾಖಲೆಗಳನ್ನು ತನ್ನ ತಾಯಿ ವಶಕ್ಕೆ ಒಪ್ಪಿಸಿದ. ಬಳಿಕ ಅವರು ರಾಯಭಾರಿ ಕಚೇರಿಯ ಭದ್ರತಾ ಅಧಿಕಾರಿಗೆ ನೀಡಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ರಾಷ್ಟ್ರೀಯ ಭದ್ರತಾ ಮಂಡಳಿ, ದಾಖಲೆಗಳನ್ನು ಕಳೆದುಕೊಂಡಿದ್ದರಿಂದ ಇಸ್ರೇಲ್‌ನ ಭದ್ರತೆಗೆ ಯಾವುದೇ ರೀತಿ ಧಕ್ಕೆಯಾಗಿಲ್ಲ ಎಂದು ತಿಳಿಸಿದೆ. ಶಬ್ಬಾತ್‌ ಅವರ ಆಪ್ತನಿಗೆ ಎಚ್ಚರಿಕೆ ನೀಡಲಾಗಿದೆ.

‘ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಇದರಿಂದ, ಹೊಸ ಪಾಠವನ್ನು ಕಲಿತಿದ್ದೇವೆ’ ಎಂದು ಇಸ್ರೇಲಿ ಪ್ರಧಾನಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.