ADVERTISEMENT

3 ಸಣ್ಣ ಉಪಗ್ರಹ ಕಕ್ಷೆಗೆ ಸೇರಿಸಿದ ಇಸ್ರೊ ರಾಕೆಟ್‌

 ಎರಡನೇ ಪ್ರಯತ್ನದಲ್ಲಿ ಗುರಿ ಸಾಧಿಸಿದ ಭಾರತೀಯ ವಿಜ್ಞಾನಿಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 14:21 IST
Last Updated 10 ಫೆಬ್ರುವರಿ 2023, 14:21 IST
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ನಿಲ್ದಾಣದ ಉಡಾವಣಾ ಕೇಂದ್ರದಿಂದ ಮೂರು ಸಣ್ಣ ಉಪಗ್ರಹಗಳನ್ನು ಹೊತ್ತ ಇಸ್ರೊದ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್‌ ಉಡಾವಣಾ ಪರೀಕ್ಷೆ ಶುಕ್ರವಾರ ಯಶಸ್ವಿಯಾಯಿತು– ಪಿಟಿಐ ಚಿತ್ರ  
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ನಿಲ್ದಾಣದ ಉಡಾವಣಾ ಕೇಂದ್ರದಿಂದ ಮೂರು ಸಣ್ಣ ಉಪಗ್ರಹಗಳನ್ನು ಹೊತ್ತ ಇಸ್ರೊದ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್‌ ಉಡಾವಣಾ ಪರೀಕ್ಷೆ ಶುಕ್ರವಾರ ಯಶಸ್ವಿಯಾಯಿತು– ಪಿಟಿಐ ಚಿತ್ರ     

ಶ್ರೀಹರಿಕೋಟಾ (ಆಂಧ್ರಪ್ರದೇಶ): ಸಣ್ಣ ಮೂರು ಉಪಗ್ರಹಗಳನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್‌ (ಸ್ಮಾಲ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌–ಸಣ್ಣ ಉಪಗ್ರಹ ಉಡಾವಣಾ ನೌಕೆ) ಅನ್ನು ಇಸ್ರೊ ಶುಕ್ರವಾರ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಚೊಚ್ಚಲ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಸೆ ಅನುಭವಿಸಿದ್ದ ಇಸ್ರೊ, ಕೆಲವೇ ತಿಂಗಳ ನಂತರ ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.

ಬೆಳಿಗ್ಗೆ 9.18ಕ್ಕೆ ನಭಕ್ಕೆ ಚಿಮ್ಮಿದ 34 ಮೀಟರ್ ಎತ್ತರದ ಎಸ್‌ಎಸ್‌ಎಲ್‌ವಿ ರಾಕೆಟ್, 450 ಕಿ.ಮೀ ಅಂತರದ ಕಕ್ಷೆಗೆ 15 ನಿಮಿಷಗಳಲ್ಲಿ ತಲುಪಿತು. ಮೂರು ಸಣ್ಣ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು.

ADVERTISEMENT

‘ಎಸ್‌ಎಸ್‌ಎಲ್‌ವಿ’ಯ ಎರಡನೇ ಅವತರಿಣಿಕೆಯಾದ ‘ಎಸ್‌ಎಸ್‌ಎಲ್‌ವಿ-ಡಿ2’ ಉಡಾವಣಾ ವಾಹಕದ ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹ ಇಒಎಸ್‌–07 ಅನ್ನು ಕಕ್ಷೆಗೆ ಸೇರಿಸಿದೆ. ಇದರ ಜತೆಗೆ ಅಮೆರಿಕದ ಅಂಟಾರಿಸ್‌ ತಂತ್ರಜ್ಞಾನ ಸಂಸ್ಥೆಯ ಜಾನುಸ್‌–1 ಮತ್ತು ಚೆನ್ನೈನ ಸ್ಪೇಸ್ ಕಿಡ್ಜ್ ಇಂಡಿಯಾದ ‘ಆಜಾದಿ ಸ್ಯಾಟ್‌–2’ ಉಪಗ್ರಹಗಳನ್ನೂ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.

2022ರ ಆಗಸ್ಟ್‌ 7ರಂದು ಬೆಳಿಗ್ಗೆ 9.18ಕ್ಕೆ ಮೊದಲ ಪರೀಕ್ಷೆಯಲ್ಲಿ ರಾಕೆಟ್‌, ‘ಆಜಾದಿಸ್ಯಾಟ್‌’ ಸೇರಿ ಸಣ್ಣ ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದಾಗ, ಹಾದಿ ಮಧ್ಯೆ ಪಥ ಬದಲಿಸಿ, ಕಕ್ಷೆ ಸೇರಲು ವಿಫಲವಾಗಿತ್ತು. ಕೊನೆ ಹಂತದ ದತ್ತಾಂಶವೂ ನಷ್ಟವಾಗಿತ್ತು. ಕಾಕತಾಳೀಯ ಎನ್ನುವಂತೆ ಅದೇ ಕಾಲಮಾನಕ್ಕೆ ನಿಗದಿಪಡಿಸಿದ್ದ ಎರಡನೇ ಪ್ರಯತ್ನದಲ್ಲಿ ಈ ರಾಕೆಟ್‌ ಗುರಿಸಾಧಿಸಲು ಸಫಲವಾಗಿದೆ.

‘ನಮ್ಮ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿದೆ. ದೇಶದ ಬಾಹ್ಯಾಕಾಶ ಸಮುದಾಯಕ್ಕೆ ಅಭಿನಂದನೆಗಳು. ಈಗ ನಮ್ಮಲ್ಲೂ ಎಸ್‌ಎಸ್‌ಎಲ್‌ವಿ ಡಿ2 ಹೊಸ ಉಡಾವಣಾ ವಾಹನವಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ.

‘ಮೊದಲ ಪ್ರಯತ್ನದಲ್ಲಿ ಆಗಿದ್ದ ದೋಷಗಳನ್ನು ಸರಿಪಡಿಸಿದ ಇಸ್ರೊ ತಂಡವು, ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸಿನ ಹಳಿಗೆ ಮರಳಿದೆ. ಇಸ್ರೊ ಬಳಿ ಈಗ ಕಡಿಮೆ ವೆಚ್ಚದ ಉಡಾವಣಾ ವಾಹಕವಿದೆ ’ ಎಂದು ಯೋಜನೆಯ ನಿರ್ದೇಶಕ ಎಸ್‌.ವಿನೋದ್‌ ಹೇಳಿದ್ದಾರೆ.

ರಾಕೆಟ್‌ ವಿಶೇಷತೆ
10ರಿಂದ 500 ಕೆ.ಜಿಯವರೆಗಿನ ಉಪಗ್ರಹಗಳನ್ನು ಕೆಳ ಹಂತದ ಭೂಕಕ್ಷೆಗೆ ಸೇರಿಸಲು ‘ಎಸ್‌ಎಸ್‌ಎಲ್‌ವಿ’ ಉಪಯುಕ್ತವಾಗಿದೆ.

ಇದು ಕಡಿಮೆ ವೆಚ್ಚ, ಕಡಿಮೆ ಸಮಯ ಮತ್ತು ಹೆಚ್ಚು ಉಪಗ್ರಹಗಳನ್ನು ಸಾಗಿಸಲು ನೆರವಾಗಲಿದೆ. ಕನಿಷ್ಠ ಉಡಾವಣಾ ಮೂಲಸೌಕರ್ಯ ‘ಎಸ್‌ಎಸ್‌ಎಲ್‌ವಿ’ಗೆ ಸಾಕಾಗುತ್ತದೆ. ಸಣ್ಣ ಉಪಗ್ರಹ ಉಡಾವಣಾ ವಾಹಕ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಲು ಇಸ್ರೊ, ತನ್ನ ಈ ಹೊಸ ರಾಕೆಟ್‌ ಮೇಲೆ ಅಪಾರ ನಿರೀಕ್ಷೆ ಹೊಂದಿದೆ.

ಕಕ್ಷೆ ಸೇರಿದ ಉಪಗ್ರಹಗಳ ಹಿನ್ನೆಲೆ
* ಇಒಎಸ್‌–07 ಭೂ ವೀಕ್ಷಣಾ ಉಪಗ್ರಹ 156.3 ಕೆ.ಜಿ. ತೂಕವಿದೆ. ಇದರ ಅಭಿವೃದ್ಧಿ ಮತ್ತು ವಿನ್ಯಾಸವು ಇಸ್ರೊ ವಿಜ್ಞಾನಿಗಳ ಹೊಸ ಪ್ರಯೋಗ.
* ಜಾನಸ್-1 ಉಪಗ್ರಹವು 10.2 ಕೆ.ಜಿ. ತೂಕವಿದೆ. ಅಮೆರಿಕದ ‘ಅಂಟಾರಿಸ್‌’ ಸಂಸ್ಥೆ ಅಭಿವೃದ್ಧಿಪಡಿಸಿದೆ.
* ಆಜಾದಿಸ್ಯಾಟ್-2 ಉಪಗ್ರಹವು 8.2 ಕೆ.ಜಿ. ತೂಕವಿದೆ. ಚೆನ್ನೈನ ‘ಸ್ಪೇಸ್ ಕಿಡ್ಜ್ ಇಂಡಿಯಾ’ ಅಭಿವೃದ್ಧಿಪಡಿಸಿದೆ. ಇದರಲ್ಲಿ ದೇಶದ ಸುಮಾರು 750 ವಿದ್ಯಾರ್ಥಿನಿಯರ ಸಂಯೋಜಿತ ಪ್ರಯತ್ನ, ಪರಿಶ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.