ADVERTISEMENT

ಇಟಲಿಯಲ್ಲಿ ಮತ್ತೆ ತಲೆ ಎತ್ತಿದ ಕೋವಿಡ್‌–19

ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ವೃದ್ಧಿ

ಏಜೆನ್ಸೀಸ್
Published 12 ಏಪ್ರಿಲ್ 2020, 4:41 IST
Last Updated 12 ಏಪ್ರಿಲ್ 2020, 4:41 IST
   

ಇಟಲಿಯಲ್ಲಿ ಕೋವಿಡ್ -19 ಪಿಡುಗಿನ ಅಟ್ಟಹಾಸ ಮತ್ತೆ ಹೆಚ್ಚಾಗುತ್ತಿರುವುದು ಅಂಕಿಅಂಶಗಳಿಂದ ಗೊತ್ತಾಗಿದೆ.

ಶನಿವಾರ ಒಂದೇ ದಿನ ಅಲ್ಲಿ619 ಸೋಂಕಿತರು ಮೃತಪಟ್ಟಿದ್ದಾರೆ. ಅಲ್ಲದೇ, ಶುಕ್ರವಾರ 3,951 ಸೋಂಕಿತರು ಪತ್ತೆಯಾಗಿದ್ದರೆ, ಶನಿವಾರ 4,694 ಸೋಂಕು ಪ್ರಕರಣಗಳು ವರದಿಯಾಗಿರುವುದು ಅಲ್ಲಿ ಆತಂಕಕ್ಕೆ ಕಾರಣವಾಗಿದೆ.

ಏಪ್ರಿಲ್ 6 ರಿಂದ ನಂತರ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳಾವಾಗಿದೆ. ಅಲ್ಲದೆ, ಏಪ್ರಿಲ್ 4 ನಂತರ ಇದೇ ಮೊದಲ ಬಾರಿಗೆ ಸೋಂಕು ಪ್ರಕರಣಗಳು ಏರಿಕೆಯಾಗಿವೆ.

ADVERTISEMENT

ಇಟಲಿಯಲ್ಲಿ ಕೊರೊನಾ ವೈರಸ್‌ ವ್ಯಾಪಕವಾದ ಹಿನ್ನೆಲೆಯಲ್ಲಿ ಅಲ್ಲಿ ಒಂದು ತಿಂಗಳು ಲಾಕ್‌ ಡೌನ್‌ ಜಾರಿ ಮಾಡಲಾಗಿತ್ತು. ಹೀಗಾಗಿ ಮಾರ್ಚ್‌ ಅಂತ್ಯದ ಹೊತ್ತಿಗೆ ಸೋಂಕಿನ ಪ್ರಕರಣಗಳು ಮತ್ತು ಸಾವು ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಇಳಿದಿತ್ತಾದರೂ, ಇಟಲಿಯ ನಿರೀಕ್ಷೆಯ ಮಟ್ಟಕ್ಕೆ ತಗ್ಗಿರಲಿಲ್ಲ. ಹೀಗಿರುವಾಗಲೇ ಮತ್ತೆ ಸೋಂಕು, ಸಾವು ಪ್ರಕರಣಗಳು ಹೆಚ್ಚಳ ಕಂಡಿವೆ.

ಫೆ.21ರ ನಂತರ ಇಟಲಿಯಲ್ಲಿ ಕೊರೊನಾ ವೈರಸ್‌ ರುದ್ರನರ್ತನ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಲ್ಲಿ 19,468 ಮಂದಿಮೃತಪಟ್ಟಿದ್ದಾರೆ ಎಂದು ನಾಗರಿಕ ಸಂರಕ್ಷಣಾ ಏಜನ್ಸಿ ತಿಳಿಸಿದೆ. ಇದು ಹೆಚ್ಚುಕಡಿಮೆಗೆ ಅಮೆರಿಕದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಗೆ ಸಮವೂ ಹೌದು. ಇದೇ ವೇಳೆ ಹಲವು ರಾಷ್ಟ್ರಗಳಲ್ಲೂ ಸೋಂಕಿನಿಂದಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಸದ್ಯ ಇಟಲಿಯಲ್ಲಿ 152,271 ಸೋಂಕಿತರಿದ್ದು, 32,534 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.