ಟೋಕಿಯೊ: ವಿಶ್ವದ ದಕ್ಷಿಣ ಭಾಗದಲ್ಲಿರುವ 125 ರಾಷ್ಟ್ರಗಳು ಭಾರತದ ನಾಯಕತ್ವದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಪ್ರತಿಪಾದಿಸಿದರು.
ಈ ರಾಷ್ಟ್ರಗಳ ಅಭಿಪ್ರಾಯಗಳು, ಅಹವಾಲು ಆಲಿಸಲು ಭಾರತ ಕಳೆದ ವರ್ಷ ಏರ್ಪಡಿಸಿದ್ದ ಎರಡೂ ಸಭೆಗಳಲ್ಲಿ ಚೀನಾ ಗೈರುಹಾಜರಾಗಿತ್ತು. ಜಿ20 ಸಭೆಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಉಪ ಪ್ರಧಾನಿ ಲಿ ಕಿಯಾಂಗ್ ಅವರನ್ನು ನಿಯೋಜಿಸಿದ್ದರು ಎಂದು ಉಲ್ಲೇಖಿಸಿದರು.
ಭಾರತ ಮತ್ತು ಜಪಾನ್ ಸಹಭಾಗಿತ್ವದ ನಿಕೇಹಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಜೈಶಂಕರ್ ಅವರು, ‘ದಕ್ಷಿಣದ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಪರಸ್ಪರ ಸಹಮತ ಹೊಂದಿವೆ’ ಎಂದು ಅಭಿಪ್ರಾಯಪಟ್ಟರು.
‘ಪರಸ್ಪರ ಸಹಮತ ಹೊಂದುವ ನಿಲುವಿಗೆ ಕೋವಿಡ್ ಸ್ಥಿತಿ ಬಳಿಕ ಹೆಚ್ಚಿನ ಬಲ ಬಂದಿದೆ. ಭಾರತ ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಳ್ಳುವ ವರೆಗೆ, ನಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯಗಳು ಜಿ20 ಕಾರ್ಯಸೂಚಿಯಲ್ಲೂ ಇರುವುದಿಲ್ಲ ಎಂದು ಭಾವಿಸಿದ್ದವು’ ಎಂದರು.
ಈ ರಾಷ್ಟ್ರಗಳ ಭಾವನೆಗಳಿಗೆ ಧ್ವನಿ ನೀಡಲು, ಅಭಿಪ್ರಾಯಗಳನ್ನು ಆಲಿಸಲು ಕಳೆದ ವರ್ಷ ಎರಡು ಸಭೆ ಮಾಡಿದ್ದೆವು. ಬಳಿಕ 125 ರಾಷ್ಟ್ರಗಳ ಅಭಿಪ್ರಾಯ ಆಧರಿಸಿ ಜಿ20 ಶೃಂಗದ ಮುಂದಿಟ್ಟಿದ್ದೆವು ಎಂದು ಜೈಶಂಕರ್ ತಿಳಿಸಿದರು.
ಆಫ್ರಿಕನ್ ಯೂನಿಯನ್‌ಗೆ ಭಾರತ ಅಧ್ಯಕ್ಷತೆಯಲ್ಲಿಯೇ ಜಿ20 ಸದಸ್ಯತ್ವ ಸಿಕ್ಕಿದ್ದು ಕಾಕತಾಳೀಯವಲ್ಲ ಎಂಬ ನಂಬಿಕೆಯೂ ಇದೆ. ಒಟ್ಟಾರೆ ಭಾರತದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಜೊತೆಗೆ ಭಾರತದ ಸಂಬಂಧ ಕುರಿತು ಮಾತನಾಡಿದ ಅವರು, ಜಾಗತಿಕ ರಾಜಕಾರಣದಲ್ಲಿ ದೇಶಗಳು ಒಂದು ವಿಷಯ, ಒಂದು ನೀತಿಗೆ ಬದ್ಧವಾಗಿರುತ್ತವೆ. ನೀತಿಗಳ ಪಾಲನೆ ಕುರಿತಂತೆ ಭಾರತ ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದರು.
ಅಕೀ ಅಬೆ ಭೇಟಿ, ಮೋದಿಯವರ ಪತ್ರ ಹಸ್ತಾಂತರ
ಸಚಿವ ಎಸ್.ಜೈಶಂಕರ್ ಅವರು ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಅಕೀ ಅಬೆ ಅವರನ್ನು ಭೇಟಿಯಾಗಿದ್ದು, ಪ್ರಧಾನಿಯವರ ಪತ್ರ ಹಸ್ತಾಂತರಿಸಿದರು. ಭಾರತ–ಜಪಾನ್ ಬಾಂಧವ್ಯ ವೃದ್ಧಿಯಲ್ಲಿ ಶಿಂಜೊ ಅವರ ಕೊಡುಗೆ ಸ್ಮರಿಸಿದರು.
ಜಪಾನ್ನ ನಾರಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಶಿಂಜೊ ಅಬೆ ಅವರ ಮೇಲೆ ಜುಲೈ 8, 2022ರಂದು ಗುಂಡಿನ ದಾಳಿ ನಡೆದಿದ್ದು, ಅವರು ಮೃತಪಟ್ಟಿದ್ದರು. ಜಪಾನ್‌ನಲ್ಲಿ ಸುದೀರ್ಘ ಅವಧಿ ಪ್ರಧಾನಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.