ವಾಷಿಂಗ್ಟನ್: ಕಾಶ್ಮೀರ ವಿವಾದದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.
ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ವಿಷಮ ಸ್ಥಿತಿಯಲ್ಲಿ ಕಾಶ್ಮೀರ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಂತೋಷದಿಂದಲೇ ಒಪ್ಪಿಕೊಳ್ಳುವೆ ಎಂದು ಶ್ವೇತಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜತೆಗೆ ದೂರವಾಣಿ ಮೂಲಕ ಟ್ರಂಪ್ ಅವರು ಸಂಭಾಷಣೆ ನಡೆಸಿದ ಮರುದಿನ ಅವರುಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾತು ಹೇಳಿದ್ದಾರೆ.
‘ನಾನು ಮೋದಿ ಅವರನ್ನು ಭೇಟಿಯಾಗಲಿದ್ದೇನೆ. ಈ ವಾರಾಂತ್ಯದಲ್ಲಿ ಫ್ರಾನ್ಸ್‌ನಲ್ಲಿ ಜತೆಗಿರಲಿದ್ದೇವೆ’ ಎಂದು ಅವರು ಹೇಳಿದ್ದಾರೆ. ಫ್ರಾನ್ಸ್‌ನ ಬಿಯಾರಿಟ್ಸ್‌ನಲ್ಲಿ ನಡೆಯಲಿರುವ ಜಿ 7 ರಾಷ್ಟ್ರಗಳ ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ಭಾಗವಹಿಸಲಿದ್ದಾರೆ.
‘ಇಮ್ರಾನ್ ಅವರು ಇತ್ತೀಚೆಗೆ ಇಲ್ಲಿಗೆ ಬಂದಿದ್ದರು. ಎರಡೂ ದೇಶಗಳ ಮುಖಂಡರ ಜತೆಗೆ ನನ್ನ ಸಂಬಂಧ ಚೆನ್ನಾಗಿದೆ. ಆದರೆ ಕಾಶ್ಮೀರದ್ದು ಬಹಳ ಸಂಕೀರ್ಣ ವಿಚಾರ. ಬಹಳ ದೀರ್ಘ ಕಾಲದಿಂದ ಇದು ಹೀಗೆಯೇ ಇದೆ’ ಎಂದಿದ್ದಾರೆ. ಎರಡೂ ದೇಶಗಳು ಹೂವಿಟ್ಜರ್ ಫಿರಂಗಿಗಳು ಮತ್ತು ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿವೆ ಎಂದೂ ಅವರು ಹೇಳಿದ್ದಾರೆ.
‘ನಾನು ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡುತ್ತಿದ್ದೇನೆ. ಆದರೆ, ಎರಡೂ ದೇಶಗಳ ನಡುವೆ ಇರುವ ಸಮಸ್ಯೆಗಳು ಅಪಾರ. ಏನಾದರೂ ಮಾಡಲು ಅಥವಾ ಮಧ್ಯಸ್ಥಿಕೆ ವಹಿಸಲು ನನ್ನಿಂದಾದ ಎಲ್ಲವನ್ನೂ ಮಾಡುತ್ತೇನೆ. ನನಗೆ ಇಬ್ಬರ ಜತೆಗೂ ಉತ್ತಮ ಸಂಬಂಧ ಇದೆ. ಆದರೆ ಆ ಎರಡು ದೇಶಗಳ ನಡುವೆ ಅಂತಹ ಗೆಳೆತನ ಇಲ್ಲ. ಸನ್ನಿವೇಶ ಬಹಳ ಸಂಕೀರ್ಣವಾಗಿದೆ’ ಎಂದು ಹೇಳಿದ್ದಾರೆ.
ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮೋದಿ ಅವರು ಕೋರಿದ್ದರು ಎಂದು ಕೆಲ ದಿನಗಳ ಹಿಂದೆ ಟ್ರಂಪ್ ಹೇಳಿದ್ದರು. ಆದರೆ, ಭಾರತ ಇದನ್ನು ನಿರಾಕರಿಸಿತ್ತು. ಇದು ದ್ವಿಪಕ್ಷೀಯ ವಿಚಾರ. ಇದರಲ್ಲಿ ಮೂರನೆಯವರಿಗೆ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಹಾಗೆಯೇ, ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ಆಂತರಿಕ ವಿಚಾರ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾರತ ದೃಢವಾಗಿ ಹೇಳಿತ್ತು. ಇರುವ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೂ ತಿಳಿಸಿತ್ತು.
* ಪರಿಸ್ಥಿತಿ ಸ್ಫೋಟಕವಾಗಿದೆ. ಸಮಸ್ಯೆಗಳಿಗೆ ಒಂದು ಕಾರಣ ಧರ್ಮ. ಅಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಇದ್ದಾರೆ. ಅವರು ಬಹಳ ಚೆನ್ನಾಗಿದ್ದಾರೆ ಎಂದು ನಾನು ಹೇಳಲಾರೆ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.