ADVERTISEMENT

ರಾಜಕೀಯ ಪಕ್ಷಗಳಿಗೆ ದೇಣಿಗೆ ಹಗರಣ‌: ಕ್ಷಮೆ ಯಾಚಿಸಿದ ಜಪಾನ್‌ ಮಾಜಿ ಪ್ರಧಾನಿ ಅಬೆ

ರಾಯಿಟರ್ಸ್
Published 25 ಡಿಸೆಂಬರ್ 2020, 7:23 IST
Last Updated 25 ಡಿಸೆಂಬರ್ 2020, 7:23 IST
ಶಿಂಜೊ ಅಬೆ
ಶಿಂಜೊ ಅಬೆ   

ಟೋಕಿಯೊ: ರಾಜಕೀಯ ಪಕ್ಷಗಳಿಗೆ ನೀಡಿದ್ದ ದೇಣಿಗೆಗೆ ಸಂಬಂಧಿಸಿದ ಹಗರಣ ಕುರಿತಂತೆ ಸಂಸತ್‌ನಲ್ಲಿ ತಾವು ನೀಡಿದ್ದ ಹೇಳಿಕೆಗೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.

‘ಪಕ್ಷಕ್ಕೆ ನೀಡಿದ ದೇಣಿಗೆಗೆ ಸಂಬಂಧಿಸಿದಂತೆ ನಾನು ಪದೇಪದೇ ನಿರಾಕರಣೆ ಮಾಡಿದ್ದು ತಪ್ಪು. ಇದಕ್ಕಾಗಿ ವಿಷಾದಿಸುತ್ತೇನೆ. ನನ್ನ ಈ ನಡೆ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಾಗುತ್ತದೆ’ ಎಂದೂ ಹೇಳಿದ್ದಾರೆ.

ಪಕ್ಷಕ್ಕೆ ಪಡೆದ ದೇಣಿಗೆ ಸಂಬಂಧ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅಬೆ ಅವರ ಕಾರ್ಯದರ್ಶಿಗೆ 1 ದಶಲಕ್ಷ ಯೆನ್‌ ( ₹ 7 ಲಕ್ಷ) ದಂಡ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಅಬೆ ಅವರಿಂದ ಕ್ಷಮೆ ಯಾಚನೆಯ ಹೇಳಿಕೆ ಹೊರಬಿದ್ದಿದೆ.

ADVERTISEMENT

ಜಪಾನ್‌ನ ಪ್ರಧಾನಿಗಳ ಪೈಕಿ ಸುದೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಅಬೆ ಅವರದು. ಚುನಾವಣೆಯಲ್ಲಿ ಪುನರಾಯ್ಕೆಗೊಳ್ಳಲು ತಮ್ಮ ಪಕ್ಷಕ್ಕೆ ದೇಣಿಗೆ ನೀಡಿದ್ದರ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಅಬೆ ಹೇಳಿಕೆ ನೀಡಿದ್ದರು.

ಈ ಹಗರಣದಿಂದ ಈಗಿನ ಪ್ರಧಾನಿ ಯೊಶಿಹಿಡೆ ಸುಗ ಅವರಿಗೆ ಮುಖಭಂಗವಾಗುವ ಅಪಾಯ ಇತ್ತು. ಅಬೆ ಅವರ ಕಟ್ಟಾ ಬೆಂಬಲಿಗರಾಗಿರುವ ಸುಗ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಅಬೆ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು.

ಅಬೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳಿರುವುದು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.