ಟೊಕಿಯೊ (ರಾಯಿಟರ್ಸ್): ಚುನಾವಣಾ ಗೆಲುವಿನ ಹಿಂದೆಯೇ ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರು, ಚೀನಾದ ಬೆದರಿಕೆ ತಡೆಗೆ ರಕ್ಷಣಾ ನೀತಿಗಳ ಪರಿಷ್ಕರಣೆ ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಕ್ಷವು (ಎಲ್‌ಡಿಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಂಸತ್ತಿನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸೊರಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೆಚ್ಚುವರಿ ಬಜೆಟ್ ನಿಗದಿ ಹಾಗೂ ಜಾಗತಿಕ ತಾಪಮಾನ ತಡೆಗೆ ಕ್ರಮಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ವರು ಹೇಳಿದ್ದಾರೆ.
ಕಿಶಿಡಾ ಅವರು ಇನ್ನೊಂದು ತಿಂಗಳಷ್ಟೇ ಅಧಿಕಾರದಲ್ಲಿ ಇರಲಿದ್ದು, ಅಲ್ಪಾವಧಿಗೆ ಅಧಿಕಾರದಲ್ಲಿದ್ದ ಮತ್ತೊಬ್ಬ ಪ್ರಧಾನಿ ಎಂಬ ಪಟ್ಟಿಗೆ ಸೇರುವಂತೆ ಎಂಬ ಅಭಿಪ್ರಾಯವಿತ್ತು. ಆದರೆ, ಚುನಾವಣಾ ಫಲಿತಾಂಶಗಳು ಇದನ್ನು ಸುಳ್ಳಾಗಿಸಿವೆ. ಜನರ ಧ್ವನಿಗೆ ಅನುಗುಣವಾಗಿ ನೀತಿಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲಿದ್ದೇವೆ ಎಂದು ಕಿಶಿಡಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಕ್ಷಣಾ ನೀತಿಗೆ ಪರಿಷ್ಕರಣೆ, ಜಿಡಿಪಿಯ ಶೇ 2ರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸಲಾಗುವುದು ಎಂದು ಎಲ್‌ಡಿಪಿ ಹೇಳಿತ್ತು. ಜನರ ಜೀವ, ಜೀವನದ ರಕ್ಷಣೆಯೇ ಮೊದಲ ಆದ್ಯತೆ. ಇದಕ್ಕೆ ಬಜೆಟ್ ತೊಡಕಾಗದು ಎಂದು ಕಿಶಿಡಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.