ADVERTISEMENT

ಜಪಾನ್ ಭೂಕಂಪ; ಹಿಮವನ್ನೇ ಕರಗಿಸಿ ನೀರು ಕುಡಿಯಬೇಕಾದ ಪರಿಸ್ಥಿತಿ

ರಾಯಿಟರ್ಸ್
Published 8 ಜನವರಿ 2024, 11:16 IST
Last Updated 8 ಜನವರಿ 2024, 11:16 IST
<div class="paragraphs"><p>ಜಪಾನ್‌ನ ರಕ್ಷಣಾ ಇಲಾಖೆ ಸೈನಿಕರು ಭೂಕಂಪ ಪೀಡಿತ ಪ್ರದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ಹಿಮಪಾತದ ನಡುವೆಯೂ ಸಾಗಿಸಿದರು</p></div>

ಜಪಾನ್‌ನ ರಕ್ಷಣಾ ಇಲಾಖೆ ಸೈನಿಕರು ಭೂಕಂಪ ಪೀಡಿತ ಪ್ರದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ಹಿಮಪಾತದ ನಡುವೆಯೂ ಸಾಗಿಸಿದರು

   

ರಾಯಿಟರ್ಸ್ ಚಿತ್ರ

ನಿಶಿಯಾರಾಯಾ: ಪ್ರಬಲ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಜಪಾನ್‌ನಲ್ಲಿ ಪಶ್ಚಿಮ ತೀರದ ಪ್ರದೇಶಗಳ ಜನರು ನೀರು ಹಾಗೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಪುನರ್ವಸತಿ ಯಾವಾಗ ಸಿಗಲಿದೆ ಎಂಬ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ADVERTISEMENT

2024ರ ಹೊಸ ವರ್ಷದ ದಿನವೇ ಈ ಭಾಗದಲ್ಲಿ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆಯ ಭೂಕಂಪದಿಂದಾಗಿ ಕನಿಷ್ಠ 168 ಜನ ಮೃತಪಟ್ಟಿದ್ದರು. 323 ಜನ ಈಗಲೂ ನಾಪತ್ತೆಯಾಗಿದ್ದಾರೆ. ಇಲ್ಲಿನ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಕುಸಿದಿದೆ. ಹಿಮಪಾತವಾಗುತ್ತಿದೆ ಮತ್ತು ಮಳೆಯೂ ಬಿಟ್ಟೂಬಿಡದೆ ಸುರಿಯುತ್ತಿದೆ. ಇದರಿಂದಾಗಿ ನೆರವು ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

‘ಗುಡ್ಡ ಕುಸಿತ, ರಸ್ತೆಯಲ್ಲಿ ಬೃಹತ್ ಬಿರುಕುಗಳಿಂದಾಗಿ ಮನೆಗಳು ನೆಲಸಮಗೊಂಡಿವೆ. ಆದರೆ ಇಂಥ ಬೃಹತ್ ಹಾನಿಯಿಂದ ಪಾರಾಗಿರುವ ನಿಶಿಯಾರಾಯಾ ಗ್ರಾಮದಲ್ಲಿ 10 ಸಾವಿರ ಜನರಿದ್ದು, ಅವರು ಹಿಮವನ್ನೇ ಕರಗಿಸಿ ನೀರು ಕುಡಿಯುತ್ತಿದ್ದಾರೆ’ ಎಂದು ವರದಿಯಾಗಿದೆ.

ಮರು ನಿರ್ಮಾಣ ಕಾರ್ಯ ಯಾವಾಗ?

‘ಭೂಕಂಪ ಪೀಡಿತ ಜನರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ವಿಷಯ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ನಮಗೆ ಇಲ್ಲಿ ಬದುಕುವುದೇ ಕಷ್ಟವಾದರೆ, ಊರು ಬಿಡುವ ಯೊಚನೆಯನ್ನೂ ಮಾಡಬೇಕಾಗಲಿದೆ. ಹೀಗಾಗಿ ನಮಗೆ ಎಂದು ಪುನರ್ವಸತಿ ಸಿಗಲಿದೆ ಎಂಬುದನ್ನು ಶೀಘ್ರದಲ್ಲಿ ತಿಳಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಪ್ರತಿಕ್ರಿಯಿಸಿ, ‘ಸುಮಾರು 500 ನಿರಾಶ್ರಿತರಿಗೆ ಭೂಕಂಪ ಪೀಡಿತ ಪ್ರದೇಶದ ಸಮೀಪದಲ್ಲೇ ಇರುವ ಕ್ರೀಡಾ ಸಂಕೀರ್ಣದಲ್ಲಿ ತಾತ್ಕಾಲಿಕ ವಾಸ್ತವ್ಯ ವ್ಯವಸ್ಥೆ ಮಾಡಲಾಗುವುದು. ಹೋಟೆಲ್‌ ಕೊಠಡಿಗಳು ಹಾಗೂ ಇನ್ನಿತರ ಆಶ್ರಯ ತಾಣಗಳ ಕುರಿತು ಸರ್ಕಾರವೂ ಚಿಂತಿಸುತ್ತಿದೆ’ ಎಂದಿದ್ದಾರೆ.

‘ಭೂಕಂಪ ಪೀಡಿತ ಪ್ರದೇಶ ಪುನರ್ವಸತಿಗಾಗಿ ಸರ್ಕಾರಕ್ಕೆ ₹ 2.73 ಶತಕೋಟಿಯಷ್ಟು ಅಗತ್ಯವಿದೆ. ಆದರೆ ಹವಾಮಾನ ವೈಪರೀತ್ಯವು ಪುನರ್ವಸತಿ ಕಾರ್ಯಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ರಕ್ಷಣಾ ಕಾರ್ಯಾಚರಣೆ ಅಪಾಯಕಾರಿಯಾಗಿದೆ. ಇನ್ನೂ ಹಲವು ದಿನ ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಸರ್ಕಾರ ಹೇಳಿದೆ.

ಪೆಸಿಫಿಕ್‌ ಸಾಗರ ವ್ಯಾಪ್ತಿಗೆ ಒಳಪಡುವ ಜಪಾನ್‌ನಲ್ಲಿ ಲಾವಾರಸ ಉಕ್ಕಿಸುವ ಹಲವು ಕಂದಕಗಳು ಕಡಲಾಳದಲ್ಲಿವೆ. ಹೀಗಾಗಿ ರಿಕ್ಟರ್‌ ಮಾಪಕದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಭೂಕಂಪ ಸಂಭವಿಸುವ ಪ್ರದೇಶಗಳು ಇಲ್ಲಿಯೆ ಇವೆ. 

2016ರಲ್ಲಿ ಜಪಾನ್‌ ನೈರುತ್ಯ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ 276 ಜನ ಮೃತಪಟ್ಟಿದ್ದರು. ಅದಾದ ನಂತರ ಅತಿ ಹೆಚ್ಚು ಸಾವು–ನೋವು ಸಂಭವಿಸಿದ ಭೂಕಂಪ ಇದೇ ಆಗಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.