ADVERTISEMENT

Covid-19 World Update: ಫೈಝರ್ ಕೋವಿಡ್ ಲಸಿಕೆ ಪಡೆದ ಜೋ ಬೈಡನ್

ಏಜೆನ್ಸೀಸ್
Published 22 ಡಿಸೆಂಬರ್ 2020, 8:41 IST
Last Updated 22 ಡಿಸೆಂಬರ್ 2020, 8:41 IST
ಫೈಝರ್ ಕೋವಿಡ್ ಲಸಿಕೆ ಪಡೆದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್
ಫೈಝರ್ ಕೋವಿಡ್ ಲಸಿಕೆ ಪಡೆದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್   

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ಅವರ ಮೊದಲ ಕೋವಿಡ್‌–19 ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಸುರಕ್ಷತೆಯನ್ನು ಅಮೆರಿಕದ ನಾಗರಿಕರಿಗೆ ಸಾರುವ ನಿಟ್ಟಿನಲ್ಲಿ ಟಿವಿ ನೇರ ಪ್ರಸಾರದಲ್ಲಿ ಬೈಡನ್ ಲಸಿಕೆ ಪಡೆದರು.

ಎಡಗೈ ಶರ್ಟ್‌ ಮಡಿಚಿ, ತೋಳು ಪ್ರದರ್ಶಿಸಿ ಲಸಿಕೆ ಚುಚ್ಚಿಸಿಕೊಳ್ಳಲು ಬೈಡನ್‌ ಅಣಿಯಾದರು. ಕ್ರಿಸ್ಟಿಯಾನಾಕೇರ್‌ ಹಾಸ್ಪೆಟಲ್‌ನ ನರ್ಸ್‌ ಒಬ್ಬರು ಫೈಝರ್‌ ಮತ್ತು ಬಯೋಎನ್‌ಟೆಕ್‌ ಅಭಿವೃದ್ಧಿ ಪಡಿಸಿರುವ ಕೋವಿಡ್‌ ಲಸಿಕೆಯನ್ನು ಅವರಿಗೆ ನೀಡಿದರು.

ಲಸಿಕೆ ಅಭಿವೃದ್ಧಿಗಾಗಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದ ಟ್ರಂಪ್‌ ಆಡಳಿತವನ್ನು ಬೈಡನ್ ಶ್ಲಾಘಿಸಿದರು ಎಂದು ವರದಿಯಾಗಿದೆ. 'ಲಸಿಕೆ ಲಭ್ಯವಾಗುತ್ತಿದ್ದಂತೆ ಜನರು ಅದನ್ನು ಪಡೆಯಲು ಸಿದ್ಧರಿರಲಿ ಎಂಬ ಕಾರಣಕ್ಕಾಗಿ ನಾನು ಲಸಿಕೆ ಪಡೆದುಕೊಂಡಿದ್ದೇನೆ' ಎಂದರು.

ADVERTISEMENT

ಬೈಡನ್‌ ಮಾಸ್ಕ್‌ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಚುನಾವಣಾ ಪ್ರಚಾರ ದಿನಗಳಿಂದಲೂ ಅನುಸರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಉಪಾಧ್ಯಕ್ಷ ಮೈಕ್‌ ಪೆನ್ಸ್ ಸೇರಿದಂತೆ ಇತರೆ ಸಂಸದರು ಶುಕ್ರವಾರ ಶ್ವೇತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋವಿಡ್‌ ಲಸಿಕೆ ಸ್ವೀಕರಿಸಿದ್ದಾರೆ.

ಜಗತ್ತಿನಾದ್ಯಂತ ಒಟ್ಟು 7.77 ಕೋಟಿ ಪ್ರಕರಣಗಳು

ಅಮೆರಿಕದಲ್ಲಿ ಕೋವಿಡ್‌–19 ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1.84 ಕೋಟಿ ದಾಟಿದ್ದು, ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದಾಗಿ ಜಾನ್‌ ಹಾಪ್ಕಿನ್ಸ್‌ ಯೂನಿವರ್ಸಿಟಿ ಮಾಹಿತಿಯಿಂದ ತಿಳಿದು ಬಂದಿದೆ. ಈವರೆಗೂ 3.26 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ 73.44 ಲಕ್ಷ ಸಕ್ರಿಯ ಪ್ರಕರಣಗಳಿರುವುದಾಗಿ ವರ್ಡೊಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ. ಸದ್ಯ ಅಮೆರಿಕ ಆಡಳಿತವು ಫೈಝರ್‌–ಬಯೋಎನ್‌ಟೆಕ್‌ ಮತ್ತು ಮಾಡರ್ನಾ ಅಭಿವೃದ್ಧಿ ಪಡಿಸಿರುವ ಲಸಿಕೆ ಬಳಕೆಗೆ ಅನುಮೋದಿಸಿದೆ.

ಕೋಟಿ ಪ್ರಕರಣಗಳು ದಾಟಿರುವ ಭಾರತ ಕೋವಿಡ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 1.46 ಲಕ್ಷಕ್ಕೂ ಹೆಚ್ಚು ಜನರು ಸಾವಿ‌ಗೀಡಾಗಿದ್ದಾರೆ. ಬ್ರೆಜಿಲ್‌ನಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳು ಭಾರತಕ್ಕಿಂತಲೂ ಕಡಿಮೆ (72.64 ಲಕ್ಷ) ಇದ್ದರೂ, ಸಾವಿನ ಸಂಖ್ಯೆಯಲ್ಲಿ(1.87 ಲಕ್ಷ) ಅಮೆರಿಕದ ನಂತರದ ಸ್ಥಾನದಲ್ಲಿದೆ. ಅಲ್ಲಿ 7.89 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇನ್ನೂ ಫ್ರಾನ್ಸ್‌ನಲ್ಲಿ 22.33 ಲಕ್ಷ ಸಕ್ರಿಯ ಪ್ರಕರಣಗಳಿರುವುದಾಗಿ ವರದಿಯಾಗಿದೆ.

ಈ ಮೂಲಕ ಜಗತ್ತಿನಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 7.77 ಕೋಟಿ ದಾಟಿದೆ. ಈ ಪೈಕಿ 5.45 ಕೋಟಿ ಜನರು ಗುಣಮುಖರಾಗಿದ್ದು, 17.08 ಲಕ್ಷ ಜನರು ಮೃತಪಟ್ಟಿದ್ದಾರೆ. 2.14 ಕೋಟಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.