ADVERTISEMENT

ಟ್ರಂಪ್ ಸರ್ಕಾರದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಜೋ ಬೈಡನ್

ಏಜೆನ್ಸೀಸ್
Published 21 ಜನವರಿ 2021, 6:35 IST
Last Updated 21 ಜನವರಿ 2021, 6:35 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡನ್‌ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಟ್ರಂಪ್‌ ಸರ್ಕಾರದ ಮುಸ್ಲಿಮರ ಪ್ರಯಾಣ ನಿಷೇಧ ನೀತಿಯ ತೆರವು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬೈಡನ್‌ ಸಹಿ ಮಾಡಿದ್ದಾರೆ.

ಮುಸ್ಲಿಮರ ಪ್ರಯಾಣ ನಿರ್ಬಂಧ ನೀತಿಯಿಂದಾಗಿ ಮುಸ್ಲಿಮರುಬಹುಸಂಖ್ಯಾತರಾಗಿರುವ ದೇಶಗಳ ಪ್ರಯಾಣಿಕರ ಅಮೆರಿಕ ಪ್ರಯಾಣವನ್ನು ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ನಿರ್ಬಂಧಿಸಿತ್ತು. ಇದೀಗ ಈ ನೀತಿಯಿಂದ ತೊಂದರೆ ಅನುಭವಿಸಿದ ಪ್ರದೇಶದವರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಅಕ್ರಮ ವಲಸಿಕರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಟ್ರಂಪ್‌ ಸರ್ಕಾರದ ಕ್ರಮಕ್ಕೆ ತಡೆಯೊಡ್ಡಿರುವ ಬೈಡನ್‌, ಮೆಕ್ಸಿಕೊ ಗಡಿಯುದ್ದಕ್ಕೂ ನಿರ್ಮಿಸಲು ಯೋಜಿಸಿದ್ದ ಗೋಡೆ ಕಾಮಗಾರಿಗೆ ‘ತಕ್ಷಣದ ಮುಕ್ತಾಯ’ ಘೋಷಿಸಿದ್ದಾರೆ. ಪ್ಯಾರಿಸ್‌ ಒಪ್ಪಂದಕ್ಕೆ ಮರುಸೇರ್ಪಡೆ ಹಾಗೂ ವಲಸಿಗ ನಿರಾಶ್ರಿತರ ರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.

ADVERTISEMENT

ವಲಸೆಗೆ ಸಂಬಂಧಿಸಿ ಸಮಗ್ರವಾದ ನೀತಿಯ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಬೈಡನ್‌ ಅವರು ಅಧ್ಯಕ್ಷರಾಗಿ ಕೈಗೊಳ್ಳುವ ಆರಂಭಿಕ ಕ್ರಮಗಳಲ್ಲಿ ಒಂದು ಎಂದು ಶ್ವೇತ ಭವನದ ಹೊಸ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದರು.

ಅಧ್ಯಕ್ಷರ ಮೊದಲ ಟ್ವೀಟ್‌
ಬೈಡನ್‌ ಅಧ್ಯಕ್ಷರಾದ ಬಳಿಕ ಮಾಡಿರುವ ಮೊದಲ ಟ್ವೀಟ್‌ನಲ್ಲಿ, ಸಮಯ ವ್ಯರ್ಥ ಮಾಡದೆ ಕೆಲಸ ಮಾಡುವ ಭರವಸೆ ನೀಡಿದ್ದಾರೆ.

‘ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಯ ವ್ಯರ್ಥಮಾಡಲಾಗದು. ಅಮೆರಿಕ ಕುಟುಂಬದವರಿಗೆ ತಕ್ಷಣದ ಪರಿಹಾರ ಮತ್ತು ಸಮರ್ಥ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಅಧಿಕಾರ ಪಡೆಯುವುದಕ್ಕಾಗಿ ಇಂದು ಓವಲ್‌ ಕಚೇರಿಗೆ ತೆರಳುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.