ADVERTISEMENT

ಅಮೆರಿಕದ ಪ್ರಭಾವಿ ಸೆನೆಟರ್‌ ಜಾನ್ ಮೆಕೇನ್‌ ನಿಧನ

2008ರಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ

ಪಿಟಿಐ
Published 26 ಆಗಸ್ಟ್ 2018, 11:29 IST
Last Updated 26 ಆಗಸ್ಟ್ 2018, 11:29 IST
ಜಾನ್‌ ಮೆಕೇನ್‌
ಜಾನ್‌ ಮೆಕೇನ್‌   

ನ್ಯೂಯಾರ್ಕ್‌: ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಪಬ್ಲಿಕನ್‌ ಪಕ್ಷದ ಅಮೆರಿಕದ ಪ್ರಭಾವಿ ಸೆನೆಟರ್‌ ಜಾನ್‌ ಮೆಕೇನ್‌ ಅವರು ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಅರಿಜೋನಾದಿಂದ ಆರು ಬಾರಿ ಸಂಸದರಾಗಿದ್ದ ಮೆಕೇನ್‌, 2017ರಲ್ಲಿ ಮೆದುಳಿನ ಗಂಭೀರ ಕ್ಯಾನ್ಸರ್‌ಗೆ ತುತ್ತಾಗಿರುವುದು ಪತ್ತೆಯಾದ ಬಳಿಕ ರೇಡಿಯೇಷನ್‌, ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಶುಕ್ರವಾರವಷ್ಟೇ ಸ್ಥಗಿತಗೊಳಿಸಲಾಗಿತ್ತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದರು.

‘ನನ್ನ ಹೃದಯ ಚೂರಾಗಿದೆ. ಸಾಹಸವನ್ನು ಇಷ್ಟಪಡುತ್ತಿದ್ದ ಅತ್ಯದ್ಭುತ ವ್ಯಕ್ತಿಯೊಂದಿಗೆ 38 ವರ್ಷಗಳ ಕಾಲ ಜೀವನ ನಡೆಸಿರುವುದಕ್ಕೆ ನನಗೆ ಖುಷಿಯಿದೆ. ಅವರು ಅಂದುಕೊಂಡತೆ ಜೀವಿಸಿ, ನಿರ್ಗಮಿಸಿದ್ದಾರೆ’ ಎಂದು ಮೆಕೇನ್‌ ಅವರ ಪತ್ನಿ ಸಿಂಡಿ ಮೆಕೇನ್‌ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ADVERTISEMENT

ಭಾರತದ ಸ್ನೇಹಿತ: ಭಾರತರ ಪರ ನಿಲುವು ಹೊಂದಿದ್ದ ಮೆಕೇನ್‌, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡುವ ಮುನ್ನ ಎರಡು ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ಸಂಬಂಧಿ ವೃದ್ಧಿ ಕುರಿತು ಸಿಎನ್‌ಎನ್‌ ಸುದ್ದಿಸಂಸ್ಥೆಯಲ್ಲಿ ಸಂಪಾದಕೀಯ ಬರೆದಿದ್ದರು.

ಕಂಬನಿ: ಮೆಕೇನ್‌ ಸಾವಿಗೆ ಪಕ್ಷಬೇಧ ಮರೆತು ಎಲ್ಲರೂ ಕಂಬನಿ ಮಿಡಿದಿದ್ದಾರೆ. ‘ಮೆಕೇನ್‌ ಅವರ ಸಾವು ತೀವ್ರ ನೋವುಂಟು ಮಾಡಿದ್ದು, ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ನಿರಾಶ್ರಿತರ ವಿಚಾರದಲ್ಲಿ ಕಠಿಣ ನಿಲುವು ಹಾಗೂ ಆಡಳಿತದಲ್ಲಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕಳೆದ ಒಂದು ವರ್ಷದಿಂದ ಈಚೆಗೆ ಮೆಕೇನ್‌ ಅವರು ಬಹಿರಂಗವಾಗಿ ಟೀಕಿಸಿದ್ದರು.

ಅಧ್ಯಕ್ಷೀಯ ಅಭ್ಯರ್ಥಿ: ಅಮೆರಿಕ ಸೆನೆಟ್‌ನ ಸೇನಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಮೆಕೇನ್‌ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 2000ನೇ ಇಸವಿಯಲ್ಲಿ ಜಾರ್ಜ್‌ ಡಬ್ಲ್ಯು ಬುಷ್‌ ವಿರುದ್ಧ ಪ್ರಾಥಮಿಕ ಹಂತದ ಪ್ರಚಾರದಲ್ಲಿ ಸೋಲುಂಡಿದ್ದರು. 2008ರಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದರೂ, ಒಬಾಮಾ ವಿರುದ್ಧ ಸೋಲುಂಡಿದ್ದರು.

ಯುದ್ಧದ ಹಿರೋ: ನೌಕಾಸೇನೆ ಅಧಿಕಾರಿಯಾಗಿ ವಿಯೆಟ್ನಾಂ ಯುದ್ಧದ ವೇಳೆ ಐದು ವರ್ಷಗಳ ಕಠಿಣ ಶಿಕ್ಷೆಗೂ ಗುರಿಯಾದರೂ, ಕೆಚ್ಚೆದೆಯ ಹೋರಾಟ ಪ್ರದರ್ಶಿದಕ್ಕಾಗಿ ಯುದ್ಧದ ಹಿರೋ ಎಂದು ಅಮೆರಿಕದಲ್ಲಿ ಮನೆಮಾತಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.