ADVERTISEMENT

ಕಾಬೂಲ್ ದಾಳಿ: 'ಭಯೋತ್ಪಾದನೆಯ ವಿರುದ್ಧ ಜಾಗತಿಕ ಒಗ್ಗಟ್ಟು ಪ್ರದರ್ಶಿಸಬೇಕಿದೆ'

ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಭದ್ರತಾ ಮಂಡಳಿಯಲ್ಲಿ, ಹೇಳಿಕೆ

ಪಿಟಿಐ
Published 27 ಆಗಸ್ಟ್ 2021, 7:04 IST
Last Updated 27 ಆಗಸ್ಟ್ 2021, 7:04 IST
ಟಿ.ಎಸ್. ತಿರುಮೂರ್ತಿ
ಟಿ.ಎಸ್. ತಿರುಮೂರ್ತಿ   

ವಿಶ್ವಸಂಸ್ಥೆ: ಕಾಬೂಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿರುವ ಭಾರತ, ಈ ಘಟನೆ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಸರೆ ನೀಡುವವರ ವಿರುದ್ಧ ವಿಶ್ವದ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲುವ ಅಗತ್ಯವನ್ನು ಸಾರಿ ಹೇಳುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.

ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಮತ್ತು ಬಂಧೂಕುಧಾರಿಗಳು ಗುರುವಾರ ನಡೆಸಿದ ದಾಳಿಯಿಂದಾಗಿ ಅಮೆರಿಕದ 13 ಸೈನಿಕರು ಹಾಗೂ60 ಮಂದಿ ಅಫ್ಗನ್ನರು ಮೃತಪಟ್ಟಿದ್ದಾರೆ.

‘ಕಾಬೂಲ್‌ನಲ್ಲಿ ನಡೆದ ಭಯೋತ್ಪಾಕ ದಾಳಿಯನ್ನು ನಾನು ಖಂಡಿಸುತ್ತೇನೆ. ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ‘ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಟಿ.ಎಸ್. ತಿರುಮೂರ್ತಿ ಗುರುವಾರ ಹೇಳಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಇಥಿಯೋಪಿಯಾ ಕುರಿತು ಮಾಹಿತಿ ಹಂಚಿಕೊಳ್ಳುವ ವೇಳೆ, ಕಾಬೂಲ್‌ನಲ್ಲಿ ನಡೆದಿರುವ ದಾಳಿ ಬಗ್ಗೆ ತಿರುಮೂರ್ತಿ ಪ್ರಸ್ತಾಪಿಸಿದರು. ‘ಈ ಘಟನೆ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವವರ ವಿರುದ್ಧ ಜಗತ್ತು ಒಗ್ಗಟ್ಟಾಗಿ ನಿಲ್ಲುವ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳುತ್ತಿದೆ‘ ಎಂದು ಅವರು ಪ್ರತಿಪಾದಿಸಿದರು.

ಈ ನಡುವೆ, ಕಾಬೂಲ್‌ನಲ್ಲಿ ಬಾಂಬ್ ದಾಳಿ ನಡೆಸಿ, ತಮ್ಮ ಯೋಧರ ಸಾವಿಗೆ ಕಾರಣರಾದವರನ್ನು ಮಟ್ಟ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಜ್ಞೆ ಮಾಡಿದ್ದಾರೆ.

‘ಬಾಂಬ್ ದಾಳಿ ನಡೆಸುವ ಮೂಲಕ, ಅಮೆರಿಕಕ್ಕೆ ಎಚ್ಚರಿಕೆಯ ಸೂಚನೆ ನೀಡಿರುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಆ ದಾಳಿಯನ್ನು ಮರೆಯುವುದಿಲ್ಲ. ಅವರನ್ನು ಬೇಟೆಯಾಡೇ ತೀರುತ್ತೇವೆ‘ ಎಂದು ಶ್ವೇತಭವನದಲ್ಲಿ ಗುರುವಾರ ಬೈಡನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.