ADVERTISEMENT

ನೇಪಾಳದಲ್ಲಿ ಸಿಲುಕಿದ ಕೈಲಾಸ ಮಾನಸ ಸರೋವರ ಯಾತ್ರಿಕರು

ಏಜೆನ್ಸೀಸ್
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
   

ಕಠ್ಮಂಡು (ಪಿಟಿಐ): ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಭಾರತಕ್ಕೆ ಮರಳುತ್ತಿದ್ದ 200 ಯಾತ್ರಿಕರು ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದು, ಈ ಅವ್ಯವಸ್ಥೆಗೆ ಖಾಸಗಿ ಪ್ರವಾಸ ವ್ಯವಸ್ಥಾಪಕರೇ ಕಾರಣ ಎಂದು ದೂರಿದ್ದಾರೆ.

ಯಾತ್ರಾರ್ಥಿಗಳಿಗೆ ಸಮರ್ಪಕ ವಸತಿ ಸೌಕರ್ಯ ಒದಗಿಸಿಲ್ಲ. ಮಳೆಯಿಂದ ಸಮಸ್ಯೆ ಹೆಚ್ಚುವ ಸಂಭವವಿದೆ. ತ್ವರಿತಗತಿಯಲ್ಲಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಯಾತ್ರಿಕರು ಒತ್ತಾಯಿಸಿದ್ದಾರೆ.

ಇಲ್ಲಿಗೆ ಬರುವಜನರ ನಿಯಂತ್ರಣಕ್ಕೆ ಯಾವುದೇ ನಿಬಂಧನೆಗಳಿಲ್ಲ. ಹಾಗಾಗಿ ಯಾತ್ರಾರ್ಥಿಗಳ ಪ್ರಮಾಣ ಹೆಚ್ಚುತ್ತಿದೆ. ಯಾತ್ರಿಕರಿಗೆ ಕನಿಷ್ಠ ಸೌಕರ್ಯವನ್ನು ಕಲ್ಪಿಸುತ್ತಿಲ್ಲ. ನಮ್ಮ ಸಮಸ್ಯೆಗೆ ಖಾಸಗಿ ಪ್ರವಾಸ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗುರುಗ್ರಾಮ್‌ ನಿವಾಸಿ ಅಗರ್‌ವಾಲ್‌ ತಿಳಿಸಿದ್ದಾರೆ.

ADVERTISEMENT

ಸದ್ಯ ಯಾತ್ರಾರ್ಥಿಗಳು ನೇಪಾಳ–ಚೀನಾ ಗಡಿಯಲ್ಲಿರುವ ಹಿಲ್ಸಾ ನಗರದಲ್ಲಿ ತಂಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಹಿಲ್ಸಾ ಮತ್ತು ಸಿಮಿಕೋಟ್‌ ನಡುವಿನ ಹೆಲಿಕಾಪ್ಟರ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಯಾತ್ರಿಕರು ಹಿಲ್ಸಾದಲ್ಲಿ ತಂಗಬೇಕಾಗಿದೆ. ಈಗ ವಾತಾವರಣ ಪರಿಸ್ಥಿತಿ ಸುಧಾರಿಸುತ್ತಿದ್ದು, ಸದ್ಯದಲ್ಲಿಯೇ ಅವರನ್ನು ಸಿಮಿಕೋಟ್‌ಗೆ ಕಳುಹಿಸಲಾಗುವುದು ಎಂದು ಭಾರತದ ಪ್ರವಾಸ ವ್ಯವಸ್ಥಾಪಕರು ತಿಳಿಸಿದ್ದಾರೆ.

‘ನಾವು ಹಿಲ್ಸಾ ನಗರ ತಲುಪಿದಾಗ ನಮಗಿಂತಲೂ ಮೊದಲು ಬಂದವರು ಇಲ್ಲಿದ್ದರು. ಮೂರು ದಿನಗಳಿಂದ ಅವರು ಇಲ್ಲಿ ತಂಗಿದ್ದರು. ಅವರು ತೆರಳಿದ ಮೇಲೆ ನಮಗೆ ಅವಕಾಶ ದೊರೆಯಲಿದೆ. ಆದರೆ, ಇಲ್ಲಿ ಸೌಲಭ್ಯಗಳು ಕಡಿಮೆ’ ಎಂದು ಯಾತ್ರಾರ್ಥಿಯಲ್ಲಿ ಒಬ್ಬರಾದ ಪಂಜಾಬ್‌ನ ಪಂಕಜ್‌ ಭಟ್ನಾಗರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.