ADVERTISEMENT

ಟೈ–ಬ್ರೇಕಿಂಗ್ ಮತ ಚಲಾಯಿಸಿದ ಕಮಲಾ; ಒಪಿಎಂ ಮುಖ್ಯಸ್ಥೆಯಾಗಿ ಕಿರಣ್ ಅಹುಜಾ ಆಯ್ಕೆ

ಪಿಟಿಐ
Published 23 ಜೂನ್ 2021, 8:02 IST
Last Updated 23 ಜೂನ್ 2021, 8:02 IST
ಕಿರಣ್ ಅಹುಜಾ
ಕಿರಣ್ ಅಹುಜಾ   

ವಾಷಿಂಗ್ಟನ್‌: ಅಮೆರಿಕದ 20 ಲಕ್ಷ ಸರ್ಕಾರಿ ನೌಕರರನ್ನು ನಿರ್ವಹಿಸುವ ಸರ್ಕಾರದ ಸಿಬ್ಬಂದಿ ನಿರ್ವಹಣಾ ಕಚೇರಿ (ಆಫೀಸ್‌ ಆಫ್‌ ಪರ್ಸನಲ್ ಮ್ಯಾನೇಜ್‌ಮೆಂಟ್‌ – ಒಪಿಎಂ) ಮುಖ್ಯಸ್ಥರಾಗಿ ಭಾರತೀಯ ಅಮೆರಿಕನ್ ಕಿರಣ್ ಅಹುಜಾ ಆಯ್ಕೆಯಾದರು.

ಸೆನೆಟ್‌ನಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ತೀವ್ರ ಹಣಾಹಣಿ (ಟೈ– ಬ್ರೇಕಿಂಗ್‌) ಹಂತ ತಲುಪಿದ್ದಾಗ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಮತ ಚಲಾಯಿಸಿ, ಕಿರಣ್ ಅಹುಜಾ ಅವರ ಆಯ್ಕೆಗೆ ಕಾರಣರಾದರು.

ಅಮೆರಿಕದ ವಕೀಲೆ ಮತ್ತು ಹೋರಾಟಗಾರ್ತಿ ಅಹುಜಾ (49), ಅಮೆರಿಕದ ಇಂಥ ಅತ್ಯನ್ನುತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೊದಲ ಭಾರತೀಯ ಅಮೆರಿಕನ್‌ ಪ್ರಜೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ADVERTISEMENT

ಸೆನೆಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಗಳ ನಡುವೆ 50–50 ಮತಗಳು ಚಲಾವಣೆಯಾದ ನಂತರ ಕಮಲಾ ಹ್ಯಾರಿಸ್ ಅವರು, ‘ನಾನು ಕಿರಣ್ ಅಹುಜಾ ಪರ ಮತ ಚಲಾಯಿಸುವುದಾಗಿ ಘೋಷಿಸಿದರು.

‘ಹೀಗೆ, ಸಮ ಮತಗಳು ಹಂಚಿಹೋಗಿ, ಸೆನೆಟ್ ಸಮವಾಗಿ ವಿಭಜನೆಯಾದಾಗ, ಉಪಾಧ್ಯಕ್ಷರು ಮತಚಲಾಯಿಸುತ್ತಾರೆ‘ ಎಂದು ಕಮಲಾ ಹ್ಯಾರಿಸ್ ಹೇಳಿದರು. ಕಮಲಾ ಅವರು ಕಿರಣ್‌ ಅಹುಜಾ ಪರ ಮತ ಚಲಾಯಿಸುವ ಮೂಲಕ, ಈ ವರ್ಷ ಆರನೇ ಬಾರಿಗೆ ಟೈ–ಬ್ರೇಕಿಂಗ್‌ನಲ್ಲಿ ಮತಚಲಾಯಿಸಿದಂತಾಗಿದೆ.

ಅಹುಜಾ ಅವರು ಎರಡು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಅನುಭವ ಹೊಂದಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ಇದೇ ಒಪಿಎಂ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಿದ್ದು ಸೇರಿದಂತೆ, ಫಿಲಾಂಥ್ರೊಪಿಕ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ ಎಂದು ಸೆನೆಟರ್ ಡಯಾನಾ ಫಿಯಿನ್‌ಸ್ಟೇನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.