ADVERTISEMENT

ಟ್ರಂಪ್ ಅಧ್ಯಾಯ ಅಂತ್ಯಗೊಳ್ಳಲಿದೆ: ಡೆಮಾಕ್ರಟಿಕ್‌ ಅಭ್ಯರ್ಥಿ ಟಿಮ್‌ ವಿಶ್ವಾಸ

ಪಿಟಿಐ
Published 22 ಆಗಸ್ಟ್ 2024, 13:51 IST
Last Updated 22 ಆಗಸ್ಟ್ 2024, 13:51 IST
<div class="paragraphs"><p>ಶಿಕಾಗೊದಲ್ಲಿ ನಡೆದ ಡೆಮಾಕ್ರಾಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಬೆಂಬಲಿಗರು, ಉಪಾಧ್ಯಕ್ಷ ಸ್ಥಾನದ ಪಕ್ಷದ ಅಭ್ಯರ್ಥಿಯಾದ ಟಿಮ್‌ ವಾಜ್‌ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು</p></div>

ಶಿಕಾಗೊದಲ್ಲಿ ನಡೆದ ಡೆಮಾಕ್ರಾಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಬೆಂಬಲಿಗರು, ಉಪಾಧ್ಯಕ್ಷ ಸ್ಥಾನದ ಪಕ್ಷದ ಅಭ್ಯರ್ಥಿಯಾದ ಟಿಮ್‌ ವಾಜ್‌ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು

   

ರಾಯಿಟರ್ಸ್‌ ಚಿತ್ರ

ಶಿಕಾಗೊ: ‘ಕಮಲಾ ಹ್ಯಾರಿಸ್ ‘ದೃಢಚಿತ್ತದ, ಅನುಭವಿ, ಅಧ್ಯಕ್ಷೆಯಾಗಲು ಸಜ್ಜಾಗಿರುವ ಮಹಿಳೆ’ ಎಂದು ಅಮೆರಿಕ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಟಿಮ್‌ ವಾಜ್‌ ಹೇಳಿದ್ದಾರೆ.

ADVERTISEMENT

‘ಅಧ್ಯಕ್ಷೀಯ ಚುನಾವಣೆಯ ಬಳಿಕ ಡೊನಾಲ್ಡ್ ಟ್ರಂಪ್‌ ಎಂಬ ಅಧ್ಯಾಯಕ್ಕೆ ಅಂತ್ಯ ಹಾಡುವುದು ನಿಶ್ಚಿತ’ ಎಂದು ಅವರು ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮಿನ್ನೆಸೊಟಾ ಗವರ್ನರ್‌ ಆಗಿರುವ 60 ವರ್ಷ ವಯಸ್ಸಿನ ಟಿಮ್ ವಾಜ್‌ ಅವರು, ‌ಉ‌ಪಾಧ್ಯಕ್ಷ ಸ್ಥಾನದ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವುದು ಬದುಕಿನಲ್ಲಿ ತಮಗೆ ದೊರೆತ ದೊಡ್ದ ಗೌರವ’ ಎಂದರು.

‘ಜೋ ಬೈಡನ್ ನಾಲ್ಕು ವರ್ಷ ದೃಢವಾದ, ಐತಿಹಾಸಿಕ ನಾಯಕತ್ವ ನೀಡಿದ್ದಾರೆ. ಈಗ ನಾವು, ಕಮಲಾ ಹ್ಯಾರಿಸ್‌ ಜೊತೆಗೂಡಿ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಲಿದ್ದೇವೆ’ ಎಂದರು.

ಫುಟ್‌ಬಾಲ್‌ ಕ್ರೀಡೆಯ ಮಾಜಿ ಕೋಚ್‌ ಕೂಡ ಆಗಿರುವ ಟಿಮ್ ವಾಜ್, ‘ಡೆಮಾಕ್ರಟಿಕ್ ಅತ್ಯುತ್ತಮ ತಂಡವಾಗಿದೆ. ಇದು, ಆಟದ ಕೊನೆಯ ಅವಧಿ. ಗೋಲು ಹೊಡೆದಿದ್ದೇವೆ. ಈಗ ಚೆಂಡು ನಮ್ಮ ನಿಯಂತ್ರಣದಲ್ಲಿಯೇ ಇದೆ. ಕ್ಷೇತ್ರವನ್ನು ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದು ಕ್ರೀಡೆಯ ಪರಿಭಾಷೆಯಲ್ಲಿಯೇ ಹೇಳಿದರು.

‘ರಿಪಬ್ಲಿಕನ್‌ ಪಕ್ಷದವರು ಸ್ವಾತಂತ್ರ್ಯದ ವಿಷಯ ಮಾತನಾಡಿದರೆ, ಸರ್ಕಾರ ನಿಮ್ಮ ಕಚೇರಿಗಳಿಗೆ ಮುಕ್ತವಾಗಿ ನುಗ್ಗಬಹುದು ಎಂದರ್ಥ. ಕಾರ್ಪೊರೇಷನ್‌ಗಳು ವಾಯು, ಜಲಮಾಲಿನ್ಯ ಮಾಡಲು ಸ್ವತಂತ್ರವಾಗಿವೆ ಎಂದು ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ವ್ಯಂಗ್ಯವಾಡಿದರು. 

‘ಡೆಮಾಕ್ರಟಿಕ್‌ ಪಕ್ಷದವರಾಗಿ ಸ್ವಾತಂತ್ರ್ಯದ ವಿಷಯ ಪ್ರಸ್ತಾಪಿಸಿದರೆ, ನಿಮ್ಮ ಆರೋಗ್ಯದ ಆರೈಕೆ ಕುರಿತು ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದರ್ಥ. ನಿಮ್ಮ ಮಕ್ಕಳು, ಭಯವಿಲ್ಲದೆ ಮುಕ್ತ ವಾತಾರಣದಲ್ಲಿ ಶಾಲೆಗೆ ತೆರಳಬಹುದು ಎಂದರ್ಥ’ ಎಂದು ಹೇಳಿದರು.

ವೇದ ಪಠಣದೊಂದಿಗೆ ದಿನದ ಕಲಾಪ ಆರಂಭ
ಶಿಕಾಗೊ (ಪಿಟಿಐ): ‘ಅಮೆರಿಕಕ್ಕೆ ಒಳಿತಾಗಲಿ’ ಎಂದು ಪ್ರಾರ್ಥಿಸಿ ವೇದಗಳ ಪಠಣ ಮಾಡುವ ಮೂಲಕ ಇಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್‌ ಪಕ್ಷದ ಸಮಾವೇಶದ ಮೂರನೇ ದಿನದ ಕಲಾಪಕ್ಕೆ ಚಾಲನೆ ನೀಡಲಾಯಿತು. ‘ನಮ್ಮಲ್ಲಿ ಭಿನ್ನಮತವಿರಬಹುದು. ಆದರೆ ದೇಶದ ವಿಷಯ ಬಂದಾಗ ಎಲ್ಲರೂ ಒಗ್ಗೂಡಬೇಕು. ಆಗ ಎಲ್ಲರೂ ನ್ಯಾಯಸ್ಥಾನದತ್ತ ಸಾಗಲು ಸಾಧ್ಯ’ ಎಂದು ಅರ್ಚಕ ರಾಕೇಶ್‌ ಭಟ್ ಹೇಳಿದರು.  ‘ಉತ್ತಮ ಸಮಾಜಕ್ಕಾಗಿ ನಾವು ಒಂದಾಗಿರೋಣ. ನಮ್ಮ ಮನಸ್ಸುಗಳು ಒಟ್ಟಾಗಿ ಚಿಂತಿಸಲಿ. ಹೃದಯಗಳ ಬಡಿತ ಒಂದೇ ಆಗಿರಲಿ. ಇದು ನಮ್ಮನ್ನು ಶಕ್ತಿವಂತರಾಗಿಸಲಿ’ ಎಂದು ಅಭಿಪ್ರಾಯಪಟ್ಟರು. ಮೇರಿಲ್ಯಾಂಡ್‌ನ ಶಿವವಿಷ್ಣು ದೇಗುಲದ ಅರ್ಚಕ ರಾಕೇಶ್‌ ಭಟ್‌ ಮೂಲತಃ ಬೆಂಗಳೂರಿನವರು. ಉಡುಪಿ ಅಷ್ಟಮಠದ ಪೇಜಾವರ ಶ್ರೀಗಳು ಇವರ ಗುರು. ಉಡುಪಿ ಅಷ್ಟಮಠದಲ್ಲಿ ಕೆಲ ವರ್ಷ ಅರ್ಚಕರಾಗಿ ಕೆಲಸ ಮಾಡಿರುವ ಅವರು 2013ರಿಂದ ಮೇರಿಲ್ಯಾಂಡ್‌ನ ವಿಷ್ಣು ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಬೆಂಗಳೂರಿನ ಆಸ್ಟೀನ್‌ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಹಾಗೂ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಸಂಸ್ಕೃತ ವಿಷಯದಲ್ಲಿ ಪ‍ದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮುಖಂಡ ಅಜಯ್‌ ಭುಟೋರಿಯಾ ‘ಇಂದಿನ ಹಿಂದೂ ಪ್ರಾರ್ಥನೆ ಸ್ಮರಣೀಯ ಕ್ಷಣವಾಗಿದ್ದು ವೈವಿಧ್ಯ ಕುರಿತು ಪಕ್ಷದ ಬದ್ಧತೆಗೆ ನಿದರ್ಶನವಾಗಿದೆ’ ಎಂದು ವ್ಯಾಖ್ಯಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.