ADVERTISEMENT

ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:26 IST
Last Updated 20 ಮೇ 2022, 4:26 IST
ಚಂದ್ರ ಆರ್ಯ ಟ್ವಿಟರ್ ಖಾತೆಯ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಚಂದ್ರ ಆರ್ಯ ಟ್ವಿಟರ್ ಖಾತೆಯ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಒಟ್ಟಾವ: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಅಲ್ಲಿನ ಸಂಸತ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಎಂದು ಅವರು ಬರೆದುಕೊಂಡಿದ್ದು, ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.

ಸಂಸದ ಚಂದ್ರ ಆರ್ಯ ಹೇಳಿದ್ದೇನು?

ADVERTISEMENT

‘ಮಾನ್ಯ ಸಭಾಪತಿ.. ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ತಿನ ಸಂಸದನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು ಈ ಸಂಸತ್ತಿನಲ್ಲಿ 2018ರಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದರು. ಇದೀಗ, ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ.ರಾಷ್ಟ್ರಕವಿ ಕುವೆಂಪು ಬರೆದಿರುವ, ನಟಸಾರ್ವಭೌಮ ಹಾಡಿರುವ ಡಾ. ರಾಜ್‌ ಕುಮಾರ್ ಹಾಡಿರುವ ಕೆಲವು ಹಾಡಿನ ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ‘.

ತುಮಕೂರು ಮೂಲದ ಚಂದ್ರ ಆರ್ಯ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರು 2019ರಲ್ಲಿ ಕೆನಡಾ ದೇಶದ ನೇಪಿಯನ್ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರು ಲಿಬರಲ್ ಪಕ್ಷದಿಂದ ಸ್ಪರ್ಧಿಸಿದ್ದರು.

ಚಂದ್ರ ಆರ್ಯ ಅವರು ದ್ವಾರಾಳು ಗ್ರಾಮದ ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿ ಪುತ್ರ. ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಚಂದ್ರ ಆರ್ಯ ಧಾರವಾಡದಲ್ಲಿ ಎಂಬಿಎ ಶಿಕ್ಷಣ ಪೂರೈಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.