ADVERTISEMENT

ಇಷ್ಟವಿರಲಿ ಇಲ್ಲದೇ ಇರಲಿ, ಬ್ರಿಟನ್‌ಗೆ ಚೀನಾ ಮುಖ್ಯ: ಬ್ರಿಟನ್‌ ಪ್ರಧಾನಿ

ಬೀಜಿಂಗ್‌ಗೆ ಮೊದಲ ಭೇಟಿ ನೀಡಿದ ಪ್ರಧಾನಿ; ಉಭಯ ದೇಶಗಳ ವ್ಯಾಪಾರ ಸಂಬಂಧ ವೃದ್ಧಿಗೆ ಕ್ರಮ

ಪಿಟಿಐ
Published 28 ಜನವರಿ 2026, 15:52 IST
Last Updated 28 ಜನವರಿ 2026, 15:52 IST
ಚೀನಾದ ಬೀಜಿಂಗ್‌ಗೆ ಭೇಟಿ ನೀಡಿದ ಕಿಯರ್‌ ಸ್ಟಾರ್ಮರ್‌ ಅವರು ಉದ್ಯಮಿಗಳ ನಿಯೋಗದವರೊಂದಿಗೆ ಚರ್ಚಿಸಿದರು –ಎಎಫ್‌ಪಿ ಚಿತ್ರ
ಚೀನಾದ ಬೀಜಿಂಗ್‌ಗೆ ಭೇಟಿ ನೀಡಿದ ಕಿಯರ್‌ ಸ್ಟಾರ್ಮರ್‌ ಅವರು ಉದ್ಯಮಿಗಳ ನಿಯೋಗದವರೊಂದಿಗೆ ಚರ್ಚಿಸಿದರು –ಎಎಫ್‌ಪಿ ಚಿತ್ರ   

ಲಂಡನ್‌ (ಪಿಟಿಐ): ‘ಇಷ್ಟವಿರಲಿ ಇಲ್ಲದೇ ಇರಲಿ, ಬ್ರಿಟನ್‌ಗೆ ಚೀನಾ ಮುಖ್ಯವಾಗಿದೆ’ ಎಂದು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಹೇಳಿದ್ದಾರೆ.

ಅವರು 60 ಜನರ ವ್ಯಾಪಾರ ಮತ್ತು ಸಾಂಸ್ಕೃತಿಕ ನಿಯೋಗದೊಂದಿಗೆ ಬೀಜಿಂಗ್‌ಗೆ ಬುಧವಾರ ಭೇಟಿ ಕೊಡುವುದಕ್ಕೂ ಮುನ್ನ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರಿಟನ್‌ನ ಲೇಬರ್‌ ಪಾರ್ಟಿ ಸರ್ಕಾರವು, ಎಂಟು ವರ್ಷಗಳ ನಂತರ ಚೀನಾಕ್ಕೆ ನೀಡುತ್ತಿರುವ ಈ ಮೊದಲ ಭೇಟಿಯ ಮೂಲಕ ಆ ದೇಶದೊಂದಿಗೆ ಮತ್ತೆ ಸಂಬಂಧ ವೃದ್ಧಿಸಿಕೊಳ್ಳಲು ಆಸಕ್ತಿ ತೋರುತ್ತಿದೆ. ಅದರಲ್ಲೂ ವಿಶೇಷವಾಗಿ, ಲಂಡನ್‌ನಲ್ಲಿ ಚೀನಾದ ವಿವಾದಾತ್ಮಕ ‘ರಾಯಭಾರ ಕಚೇರಿ’ ನಿರ್ಮಾಣಕ್ಕೆ ಸಚಿವರು ಅನುಮತಿ ನೀಡಿದ ಬೆನ್ನಲ್ಲೇ ಈ ಭೇಟಿ ನಡೆಯುತ್ತಿರುವುದು ಗಮನಾರ್ಹವಾಗಿದೆ.

ADVERTISEMENT

‘ಹಲವು ವರ್ಷಗಳಿಂದ ಚೀನಾದ ಬಗ್ಗೆ ನಮ್ಮ ಧೋರಣೆಯು ಅಸ್ಥಿರತೆಯಿಂದ ಕೂಡಿದೆ. ಆದರೆ, ಇಷ್ಟವಿರಲಿ ಇಲ್ಲದಿರಲಿ, ಬ್ರಿಟನ್‌ಗೆ ಚೀನಾ ಮುಖ್ಯ. ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುವ ಆ ದೇಶದೊಂದಿಗೆ ಸ್ಥಿರವಾದ ಸಂಬಂಧವನ್ನು ಹೊಂದುವುದು ಅಗತ್ಯವಾಗಿದೆ. ನಮ್ಮ ಮಿತ್ರ ರಾಷ್ಟ್ರಗಳು ಇದನ್ನೇ ಮಾಡುತ್ತವೆ ಮತ್ತು ನಾನು ಇದನ್ನೇ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಕಿಯರ್‌ ಸ್ಟಾರ್ಮರ್‌ ಅವರು ಗುರುವಾರ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ‍್ರಧಾನಿ ಲಿ ಕಿಯಾಂಗ್‌ ಅವರನ್ನು ಭೇಟಿಯಾಗಿ ವ್ಯಾಪಾರ, ಹೂಡಿಕೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಮಾತುಕತೆ ನಡೆಸಲಿದ್ದಾರೆ. ನಂತರ ಅವರು ಶಾಂಘೈಗೆ ತೆರಳಿ ಅಲ್ಲಿ ಉಭಯ ದೇಶಗಳ ಉದ್ಯಮಿಗಳೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಟಾಟಾ ಮೋಟರ್ಸ್‌ ಒಡೆತನದ ಜಾಗ್ವಾರ್‌ ಲ್ಯಾಂಡ್‌ ರೋವರ್‌, ಕ್ರೀಡಾ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು ಮತ್ತು ರಂಗಭೂಮಿ ತಂಡಗಳು ಸೇರಿದಂತೆ ಪ್ರಮುಖರ ನಿಯೋಗದೊಂದಿಗೆ ಭೇಟಿ ನೀಡಿರುವ ಸ್ಟಾರ್ಮರ್‌ ಅವರು, ಹಣಕಾಸು ಸೇವಾ ವಲಯ, ಕೈಗಾರಿಕೆಗಳು ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಲು ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.