ADVERTISEMENT

ಉಕ್ರೇನ್ ಬಿಕ್ಕಟ್ಟು:ಐರೋಪ್ಯ ರಾಷ್ಟ್ರಗಳ ಮುಖ್ಯಸ್ಥರ ಜೊತೆಗೆ ಸ್ಟಾರ್ಮರ್‌ ಮಾತುಕತೆ

ಝೆಲೆನ್‌ಸ್ಕಿ– ಟ್ರಂಪ್‌ ಜೊತೆಗೆ ಭೇಟಿ ನಿಗದಿ

ಪಿಟಿಐ
Published 17 ಆಗಸ್ಟ್ 2025, 15:31 IST
Last Updated 17 ಆಗಸ್ಟ್ 2025, 15:31 IST
FILE PHOTO: British Prime Minister Keir Starmer leaves Downing Street in London, Britain, January 8, 2025. REUTERS/Toby Melville/File Photo
FILE PHOTO: British Prime Minister Keir Starmer leaves Downing Street in London, Britain, January 8, 2025. REUTERS/Toby Melville/File Photo   

ಲಂಡನ್‌: ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮುಂದಿನ ವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಸಭೆ ನಿಗದಿಯಾಗಿರುವಂತೆಯೇ, ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಭಾನುವಾರ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ಜೊತೆಗೆ ‘ವಿಡಿಯೊ ಕಾಲ್‌’ ಮೂಲಕ ಮಾತುಕತೆ ನಡೆಸಿದರು.

ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌, ಜರ್ಮನ್‌ ಛಾನ್ಸೆಲರ್‌ ಫ್ರಿಡ್‌ರಿಚ್‌ ಮೆರ್ಝ್‌ ಅವರ ಜೊತೆಗೆ ‘ಇಚ್ಛಾಶಕ್ತಿಯ ಮೈತ್ರಿ’ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ. ರಷ್ಯಾ– ಉಕ್ರೇನ್‌ ನಡುವಿನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಕಳೆದ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. 

‘ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಅಕ್ರಮ ಯುದ್ಧ ಕೊನೆಗಾಣಿಸಲು ಟ್ರಂಪ್ ನಡೆಸಿದ ಪ್ರಯತ್ನವನ್ನು ಶ್ಲಾಘಿಸಿದ ಸ್ಟಾರ್ಮರ್‌, ಈ ಬೆಳವಣಿಗೆಯಿಂದ ಐರೋಪ್ಯ ರಾಷ್ಟ್ರಗಳು ಮತ್ತಷ್ಟು ಹತ್ತಿರಕ್ಕೆ ತರಲು ನೆರವಾಯಿತು. ಅದೇ ರೀತಿ, ಉಕ್ರೇನ್‌ಗೆ ಮುಂದೆಯೂ ಅಚಲವಾದ ಬೆಂಬಲ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಹತ್ಯೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅವರ ನಾಯಕತ್ವವನ್ನು ಮೆಚ್ಚಲೇಬೇಕು. ಬಹಳಷ್ಟು ಪ್ರಗತಿಯಾಗಿದ್ದು, ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆಗೆ ಮುಂದಿನ ಹಂತದಲ್ಲಿ ಮಾತುಕತೆ ನಡೆಸಲಾಗುವುದು. ಉಕ್ರೇನ್‌ನಲ್ಲಿ ಶಾಂತಿಮಾರ್ಗವನ್ನು ಅವರಿಲ್ಲದೇ, ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಡೌನಿಂಗ್‌ ಸ್ಟ್ರೀಟ್‌ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಮೆರಿಕದ ಮಹತ್ವವನ್ನು ನಾವು ಸ್ವಾಗತಿಸುತ್ತೇವೆ. ಅದರ ಜೊತೆಗೆ ಯಾವುದೇ ಒಪ್ಪಂದ ನಡೆದರೂ ಉಕ್ರೇನ್‌ ಜೊತೆಗೆ ಐರೋಪ್ಯ ಒಕ್ಕೂಟವು ದೃಢವಾಗಿ ನಿಲ್ಲಲಿದೆ’ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.