ADVERTISEMENT

ಅಮೆರಿಕ, ದಕ್ಷಿಣ ಕೊರಿಯಾ ಮೇಲೆ ಕ್ಷಿಪ್ರ ದಾಳಿಗೆ ಸಿದ್ಧ: ಕಿಮ್‌ ಸಹೋದರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 16:02 IST
Last Updated 7 ಮಾರ್ಚ್ 2023, 16:02 IST
   

ಸೋಲ್‌(ಎಪಿ): ಕೊರಿಯಾ ದ್ವೀಪಕಲ್ಪದ ಮೇಲೆ ಅಮೆರಿಕವು ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ ಬಿ -52 ಬಾಂಬರ್ ವಿಮಾನ ಹಾರಾಟ ನಡೆಸಿದ ಮರು ದಿನವೇ ‘ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೇಲೆ ತ್ವರಿತ, ಅಗಾಧವಾದ ಕ್ರಮ ತೆಗೆದುಕೊಳ್ಳಲು ಉತ್ತರಕೊರಿಯಾ ಸಿದ್ಧವಾಗಿದೆ’ ಎಂದು ಸರ್ವಾಧಿಕಾರಿ ಕಿಮ್‌ಜಾಂಗ್‌ ಉನ್‌ ಅವರ ಪ್ರಭಾವಿ ಸಹೋದರಿ ಕಿಮ್ ಯೋ ಜಾಂಗ್ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾ ವಿರುದ್ಧ ಬಲಪ್ರದರ್ಶನದ ಭಾಗವಾಗಿ ಕೊರಿಯಾದ ದ್ವೀಪ ಕಲ್ಪದ ಮೇಲೆ ಬಿ -52 ಬಾಂಬರ್ ಒಳಗೊಂಡ ಅಮೆರಿಕ ಮತ್ತು ದಕ್ಷಿಣ ಕೊರಿಯಾ ವಾಯುಪಡೆಗಳ ಜಂಟಿ ಕವಾಯತು ಸೋಮವಾರ ನಡೆದಿತ್ತು. ಅಲ್ಲದೆ, ಈ ತಿಂಗಳ ಕೊನೆಯಲ್ಲಿ ಸೇನಾ ಸನ್ನದ್ಧತೆ ಪರಿಶೀಲಿಸಲು ಬೃಹತ್‌ ತಾಲೀಮಿಗೆ ದಕ್ಷಿಣ ಕೊರಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಅಮೆರಿಕ ಪಡೆಗಳು ಮತ್ತು ದಕ್ಷಿಣ ಕೊರಿಯಾದ ಕೈಗೊಂಬೆ ಸೇನೆಯ ಪ್ರಕ್ಷುಬ್ಧ ಸೇನಾಚಲನವಲನಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ. ಯಾವುದೇ ಸಮಯದಲ್ಲಿ ತ್ವರಿತ ಮತ್ತು ಅಗಾಧ ಕ್ರಮ ತೆಗೆದುಕೊಳ್ಳಲು ಸಿದ್ಧವಾಗಿಯೇ ಇದ್ದೇವೆ’ ಕಿಮ್ ಯೋ ಜಾಂಗ್‌ ಅವರು ತಮ್ಮ ಸರ್ಕಾರ ನಿಯಂತ್ರಣದ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.