ADVERTISEMENT

ಉಕ್ರೇನ್‌ ಸಂಘರ್ಷ ನಿಲ್ಲಿಸಲು ಮಾತುಕತೆಗೆ ಸಿದ್ಧ: ರಷ್ಯಾ

ರಾಯಿಟರ್ಸ್
Published 28 ಫೆಬ್ರುವರಿ 2023, 15:49 IST
Last Updated 28 ಫೆಬ್ರುವರಿ 2023, 15:49 IST

ಮಾಸ್ಕೊ: ‘ಉಕ್ರೇನ್ ಸಂಘರ್ಷ ಕೊನೆಗೊಳಿಸಲು ರಷ್ಯಾ ಮಾತುಕತೆಗೆ ಮುಕ್ತವಾಗಿದೆ. ಆದರೆ, ಹೊಸದಾಗಿ ಸ್ವಾಧೀನಪಡಿಸಿಕೊಂಡ ಪ್ರದೇಶಗಳನ್ನು ಬಿಟ್ಟುಕೊಡುವುದಿಲ್ಲ’ ಎಂಬ ನಿಲುವನ್ನು ವ್ಲಾಡಿಮಿರ್‌ ಪುಟಿನ್‌ ಅವರ ಆಡಳಿತ ಕಚೇರಿ ಕ್ರೆಮ್ಲಿನ್ ಮಂಗಳವಾರ ಪುನರುಚ್ಚರಿಸಿದೆ.

ಜನಾಭಿಪ್ರಾಯ ಸಂಗ್ರಹಿಸಿದ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ತನ್ನ ಭೂಪ್ರದೇಶಕ್ಕೆ ಸೇರಿಸಿಕೊಂಡಿರುವ ಉಕ್ರೇನ್‌ನ ನಾಲ್ಕು ಪ್ರದೇಶಗಳ ಮೇಲಿನ ಹಕ್ಕನ್ನು ಬಿಟ್ಟುಕೊಡುವುದಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಸುದ್ದಿಗಾರರಿಗೆ ತಿಳಿಸಿದರು.

ಡೊನೆಟ್‌ಸ್ಕ್‌, ಲುಹಾನ್‌ಸ್ಕ್‌, ಕೆರ್ಸಾನ್‌ ಮತ್ತು ಝಪೊರಿಝಿಯಾ ಪ್ರದೇಶಗಳ ಮೇಲಿನ ರಷ್ಯಾದ ನಿಯಂತ್ರಣ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧ. ಈ ಪ್ರದೇಶಗಳು ಸಂವಿಧಾನಬದ್ಧವಾಗಿ ರಷ್ಯಾದ ಭಾಗವಾಗಿದೆ. ಇವು ಪ್ರಮುಖ ವಾಸ್ತವಗಳು. ಈ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ಬಖ್ಮಟ್‌ನಲ್ಲಿ ವಿಷಮ ಪರಿಸ್ಥಿತಿ: ಉಕ್ರೇನ್‌

ಮಾಸ್ಕೊ/ಕೀವ್‌ (ಎಎಫ್‌ಪಿ): ಉಪ್ಪು ಗಣಿಯ ನಗರ ಬಖ್ಮಟ್‌ನಲ್ಲಿ ರಷ್ಯಾ ಪಡೆಗಳು ಹಲವು ತಿಂಗಳ ನಂತರ ದಾಳಿ ತೀವ್ರಗೊಳಿಸಿವೆ. ಪೂರ್ವ ಕೈಗಾರಿಕಾ ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ವರ್ಷ ಪೂರೈಸಿದ ಉಕ್ರೇನ್‌ ಆಕ್ರಮಣದಲ್ಲಿ ಬಖ್ಮಟ್ ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಭಾರಿ ದಾಳಿ ನಡೆಸುತ್ತಿವೆ. ಇಡೀ ನಗರ ವೈಮಾನಿಕ, ಕ್ಷಿಪಣಿ ದಾಳಿಯಿಂದ ತತ್ತರಿಸಿದೆ. ಇದುವರೆಗೆ ಭಾರಿ ಸಾವು–ನೋವು ಕೂಡ ಸಂಭವಿಸಿವೆ. ಸಾವಿರಾರು ನಾಗರಿಕರು ಈಗಾಗಲೇ ನಗರ ತೊರೆದು, ವಲಸೆ ಹೋಗಿದ್ದಾರೆ.

ಬಖ್ಮಟ್‌ ರಕ್ಷಿಸಿಕೊಳ್ಳಲು ಉಕ್ರೇನ್‌ ಪಡೆಗಳು ತೀವ್ರ ಪ್ರತಿರೋಧ ತೋರುತ್ತಿವೆ. ಆದರೆ, ಇಡೀ ನಗರವನ್ನು ರಷ್ಯಾ ಸೇನೆ ಸುತ್ತುವರಿದಿದ್ದು, ಕೈವಶ ಮಾಡಿಕೊಳ್ಳುವ ಸನಿಹದಲ್ಲಿದೆ.

ರಷ್ಯಾದ ಮೇಲೆ ಉಕ್ರೇನ್‌ ದಾಳಿ ವಿಫಲ: ರಷ್ಯಾದ ದಕ್ಷಿಣದಲ್ಲಿನ ಕ್ರಸ್ನೊದರ್‌ ಮತ್ತು ಅದಿಗಿಯಾ ಪ್ರದೇಶಗಳ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಉಕ್ರೇನ್‌ ಸೇನೆ ಸೋಮವಾರ ತಡರಾತ್ರಿ ಡ್ರೋನ್‌ ದಾಳಿಗೆ ವಿಫಲ ಯತ್ನ ನಡೆಸಿದೆ. ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಇತ್ತೀಚೆಗೆ ದೇಶದಾದ್ಯಂತ ವಾಯು ದಾಳಿಯ ಎಚ್ಚರಿಕೆ ಸಂದೇಶ ಬಿತ್ತರಿಸಿದ್ದರ ಹಿಂದೆ ಹ್ಯಾಕರ್‌ಗಳ ಕೈವಾಡವಿದೆ. ಪ್ರಾದೇಶಿಕ ಟಿ.ವಿ ವಾಹಿನಿಗಳು ಮತ್ತು ರೇಡಿಯೊ ಕೇಂದ್ರಗಳನ್ನು ಹ್ಯಾಕ್‌ ಮಾಡಿ, ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ರಷ್ಯಾ ತುರ್ತು ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ವಿಕಿಮೀಡಿಯಾಕ್ಕೆ ದಂಡ: ರಷ್ಯಾ ಸೇನೆ ಬಗೆಗಿನ ತಪ್ಪು ಮಾಹಿತಿಯನ್ನು ವಿಕಿಪೀಡಿಯಾದಿಂದ ಅಳಿಸದಿರುವುದಕ್ಕೆ ವಿಕಿಮೀಡಿಯಾ ಫೌಂಡೇಶನ್‌ಗೆ ನ್ಯಾಯಾಲಯವು ₹22 ಲಕ್ಷ ದಂಡ ವಿಧಿಸಿದೆ ಎಂದು ರಷ್ಯಾದ ನ್ಯಾಯಾಲಯಗಳ ಸೇವಾ ಇಲಾಖೆ ಮಂಗಳವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.