ADVERTISEMENT

ಗಲ್ಫ್‌ ರಾಷ್ಟ್ರಗಳ ಭಾರತದ ರಾಯಭಾರಿಗಳೊಂದಿಗೆ ಜೈಶಂಕರ್‌ ಸಭೆ

ಕುವೈತ್ ಜೊತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು

ಪಿಟಿಐ
Published 11 ಜೂನ್ 2021, 3:24 IST
Last Updated 11 ಜೂನ್ 2021, 3:24 IST
ಕುವೈತ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಸಭೆ
ಕುವೈತ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಸಭೆ   

ಕುವೈತ್ ಸಿಟಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗಲ್ಪ್ ರಾಷ್ಟ್ರಗಳ ಭಾರತದ ರಾಯಭಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿಮಾನಯಾನಶ್ರೀಘ್ರವಾಗಿ ಪುನರಾರಂಭಿಸುವುದು, ಕೋವಿಡ್‌ನಿಂದಾಗಿ ಬೇರ್ಪಟ್ಟ ಕುಟುಂಬಗಳನ್ನು ಮತ್ತೆ ಒಗ್ಗೂಡಿಸಲು ನೆರವಾಗುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಕ್ಕೆ ತನ್ನ ಚೊಚ್ಚಲ ಭೇಟಿ ನೀಡಿರುವ ಜೈಶಂಕರ್, ಕುವೈತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬಳಿಕ ಈ ಕುರಿತು ಟ್ವೀಟ್ ಮಾಡಿರುವ ಜೈಶಂಕರ್, 'ಸೌದಿ ಅರೇಬಿಯಾ, ಯುಎಇ, ಇರಾನ್, ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್‌ನಲ್ಲಿರುವ ಭಾರತದ ರಾಯಭಾರಿಗಳೊಂದಿಗೆ ಫಲಪ್ರದ ಚರ್ಚೆಗೆ ಅಧ್ಯಕ್ಷತೆ ವಹಿಸಲಾಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಭಾರತೀಯ ಸಮುದಾಯ ಕಲ್ಯಾಣವನ್ನು ಖಾತ್ರಿಪಡಿಸುವುದು, ಕೋವಿಡ್‌ನಿಂದಾಗಿ ಬೇರ್ಪಟ್ಟ ಕುಟುಂಬಗಳನ್ನು ಒಗ್ಗೂಡಿಸುವುದು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಗಲ್ಫ್‌ ಬಿಟ್ಟು ತೆರಳಿರುವ ಭಾರತೀಯ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಶೀಘ್ರವಾಗಿ ಹಿಂದಿರುಗಿಸಲು ಮಧ್ಯಸ್ಥಿಕೆ ವಹಿಸುವುದು, ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಸಹಾಯ ಮಾಡಲು ವಿಮಾನಯಾನ ಶೀಘ್ರವಾಗಿ ಪುನರಾರಂಭಿಸುವುದು ಮತ್ತು ಆರ್ಥಿಕ ಚೇತರಿಕೆಗಾಗಿ ಶೀಘ್ರದಲ್ಲೇ ವ್ಯಾಪಾರ ಬಲಗೊಳಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸರಣಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮೊದಲು ಕುವೈತ್ ವಿದೇಶಾಂಗ ಸಚಿವ ಶೇಕ್ ಅಹ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದರು. ಆರೋಗ್ಯ, ಆಹಾರ, ಶಿಕ್ಷಣ, ಶಕ್ತಿ, ಡಿಜಿಟಲ್ ಮತ್ತು ವಾಣಿಜ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಕುವೈತ್‌ನಲ್ಲಿ ಭಾರತೀಯ ಕಾರ್ಮಿಕರಿಗೆ ಹೆಚ್ಚಿನ ಕಾನೂನು ರಕ್ಷಣೆ ನೀಡುವ ಒಪ್ಪಂದಕ್ಕೆ (ಎಂಒಯು)ಸಹಿ ಹಾಕಲಾಯಿತು.

ಕುವೈತ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಕುವೈತ್‌ನ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಕುವೈತ್ ಸೇರಿದೆ.

ಇದನ್ನೂ ಓದಿ:

2021-22ನೇ ವರ್ಷವು ಭಾರತ-ಕುವೈತ್ ನಡುವಣ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಸಂದೇಶವನ್ನು ಜೈಶಂಕರ್ ತಲುಪಿದ್ದಾರೆ.

ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿಕೊಂಡಿರುವ ಕುವೈತ್, ಕಳೆದ ಕೆಲವು ವಾರಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ಭಾರತೀಯ ನೌಕಾಪಡೆಯು ಕುವೈತ್‌ನಿಂದ ಆಮ್ಲಜನಕವನ್ನು ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.