ADVERTISEMENT

ಪ್ಲಾಸ್ಟಿಕ್‌ ತ್ಯಾಜ್ಯ ಒಪ್ಪಂದಕ್ಕೆ ವಿಶ್ವಸಂಸ್ಥೆ ಒಪ್ಪಿಗೆ

ಮಹತ್ವಾಕಾಂಕ್ಷೆಯ ಒಪ್ಪಂದದಿಂದ ಹೊರಗುಳಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:11 IST
Last Updated 11 ಮೇ 2019, 19:11 IST
plastic waste
plastic waste   

ಜಿನಿವಾ: ಮಹತ್ವಾಕಾಂಕ್ಷೆಯ ‘ಪ್ಲಾಸ್ಟಿಕ್‌ ತ್ಯಾಜ್ಯ ಒಪ್ಪಂದ’ವನ್ನು ವಿಶ್ವಸಂಸ್ಥೆ ಶುಕ್ರವಾರ ಅನುಮೋದಿಸಿದೆ. ಆದರೆ, ಈ ಒಪ್ಪಂದಿಂದ ಅಮೆರಿಕ ಹೊರಗುಳಿದಿದೆ.

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆಗೊಳಿಸುವ ಸಂಬಂಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವದ ಬಹುತೇಕ ರಾಷ್ಟ್ರಗಳು ಈ ಮೂಲಕ ಬದ್ಧತೆ ತೋರಿವೆ ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್‌ ತ್ಯಾಜ್ಯ, ವಿಷಕಾರಿ ಮತ್ತು ಅಪಾಯಕಾರಿ ರಾಸಾಯನಿಕಗಳ ಕುರಿತು ಎರಡು ವಾರಗಳವರೆಗೆ ನಡೆದ ಶೃಂಗಸಭೆಯ ಕೊನೆಯಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ದೊರೆತಿದೆ.

ADVERTISEMENT

‘ಇದೊಂದು ಐತಿಹಾಸಿಕ ಒಪ್ಪಂದವಾಗಿದ್ದು, ವಿಶ್ವದ 186 ದೇಶಗಳಿಗೆ ಸಂಬಂಧಿಸಿದ್ದಾಗಿದೆ. ಈ ದೇಶಗಳು ತಮ್ಮ ಗಡಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಮೇಲೆ ನಿಗಾ ಇಡಬೇಕಾಗುವುದರ ಜತೆಗೆ ಅದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಬೇಕಾಗುತ್ತದೆ’ ಎಂದುವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಅಧಿಕಾರಿ ರೂಲ್ಫಾ ಪಯೆಟ್‌ ತಿಳಿಸಿದ್ದಾರೆ.

ಪ್ಲಾಸ್ಟಿಕ್‌ ತ್ಯಾಜ್ಯವನ್ನುಭೂಮಿ, ನದಿ, ಸಮುದ್ರದಲ್ಲಿ ಸುರಿಯುವುದರಿಂದ ವಿವಿಧ ಬಗೆಯ ಜೀವರಾಶಿಯ ಮೇಲೆ ದುಷ್ಪರಿಣಾಮ ಆಗುತ್ತಿರುವುದನ್ನು ವಿಶ್ವಸಂಸ್ಥೆಗಂಭೀರವಾಗಿ ಪರಿಗಣಿಸಿದ ಪರಿಣಾಮ ಈ ಒಪ್ಪಂದ ಏರ್ಪಟ್ಟಿದೆ.

ಕೈಗಾರಿಕೆಗಳಲ್ಲಿ, ಆರೋಗ್ಯ ರಕ್ಷಣೆ, ತಂತ್ರಜ್ಞಾನ, ಅಂತರಿಕ್ಷಯಾನ, ಆಹಾರ ಕ್ಷೇತ್ರ ಮತ್ತು ತಂಪು ಪಾನೀಯಗಳಂತಹ ಉತ್ಪನ್ನಗಳ ಮೇಲೆ ಈ ಒಪ್ಪಂದ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

‘ಖಾಸಗಿ ವಲಯ, ಗ್ರಾಹಕ ಮಾರುಕಟ್ಟೆಯಲ್ಲಿ ನಾವು ಏನನ್ನಾದರೂ ಮಾಡಲೇಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಇದು ವಿಶ್ವದ ಬಲವಾದ ರಾಜಕೀಯ ಸಂದೇಶ’ ಎಂದು ಅವರು ಬಣ್ಣಿಸಿದ್ದಾರೆ.

ಈ ಒಪ್ಪಂದದ ಕುರಿತು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುತುವರ್ಜಿವಹಿಸಿದ ನಾರ್ವೆಯ ಪ್ರಯತ್ನಕ್ಕೆ ಪಯೆಟ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾರದರ್ಶಕ ವ್ಯವಸ್ಥೆಯ ಮೂಲಕಪ್ಲಾಸ್ಟಿಕ್‌ ತ್ಯಾಜ್ಯದ ರಫ್ತು ಮತ್ತು ಆಮದು ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.ಅಮೆರಿಕ ಸೇರಿದಂತೆ ಈ ಒಪ್ಪಂದಕ್ಕೆ ಸಹಿ ಹಾಕದಿರುವ ರಾಷ್ಟ್ರಗಳಿಗೆ ಈ ಒಪ್ಪಂದದಿಂದ ತೊಂದರೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.