ಕೊಲಂಬೊ: ಶ್ರೀಲಂಕಾ ಸಂಸತ್ತಿನ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಆರಂಭವಾಗಿದೆ.
ಶ್ರೀಲಂಕಾ ಪೀಪಲ್ಸ್ ಪಾರ್ಟಿಯು (ಎಸ್‌ಎಲ್‌ಪಿಪಿ) ಮತ್ತೊಮ್ಮೆ ಸಿಂಹಳೀಯ ನಾಡಿನಲ್ಲಿ ಅಧಿಕಾರದ ಗದ್ದುಗೆಗೆ ಏರುವ ಹುಮ್ಮಸ್ಸಿನಲ್ಲಿದೆ.
‘ಕೊರೊನಾ ಸಂದರ್ಭದಲ್ಲಿ ಶಾಂತಿಯುತವಾಗಿ ನಡೆದ ಚುನಾವಣೆಯಲ್ಲಿ ಶೇಕಡ 70ಕ್ಕಿಂತಲೂ ಅಧಿಕ ಮತದಾನವಾಗಿದೆ’ ಎಂದು ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥ ಮಹಿಂದಾ ದೇಶಪ್ರಿಯ ಬುಧವಾರ ಹೇಳಿದ್ದರು.
ಸುದ್ದಿವಾಹಿನಿಯೊಂದರ ಜೊತೆಗುರುವಾರ ಮಾತನಾಡಿದಎಸ್‌ಎಲ್‌ಪಿಪಿ ಸಂಸ್ಥಾಪಕ ಮತ್ತು ಪಕ್ಷದ ರಾಷ್ಟ್ರೀಯ ಸಂಘಟಕ ಬಾಸಿಲ್ ರಾಜಪಕ್ಸೆ ‘ನಮ್ಮ ಪಕ್ಷವು ಮತ್ತೊಮ್ಮೆ ಆಡಳಿತ ನಡೆಸಲಿದೆ. ನಾವು ಮೂರನೇ ಎರಡರಷ್ಟು ಬಹುಮತ ಪಡೆದು ಇತಿಹಾಸ ನಿರ್ಮಿಸಲಿದ್ದೇವೆ’ ಎಂದಿದ್ದಾರೆ.
ಬಾಸಿಲ್ ಅವರು ಶ್ರೀಲಂಕಾದ ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಹಾಗೂ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಅವರ ಸಹೋದರ.
‘ಹಿಂದಿನ ಬಾರಿ ಗೋಟಬಯ ಅವರು ಅತಿ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಬಾರಿಯೂ ಜನ ಅವರನ್ನು ಬೆಂಬಲಿಸಲಿದ್ದಾರೆ. ಅವರು ಮತ್ತೊಂದು ಅವಧಿಗೆ ಶ್ರೀಲಂಕಾದ ಅಧ್ಯಕ್ಷ ಗಾದಿಗೆ ಏರಲಿದ್ದಾರೆ. ನಮ್ಮ ಪಕ್ಷವು ಮೂರನೇ ಎರಡರಷ್ಟು ಬಹುಮತ ಪಡೆದು ಅಧಿಕಾರಕ್ಕೇರಲಿದೆ’ ಎಂದು 74 ವರ್ಷ ವಯಸ್ಸಿನ ಮಹಿಂದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ 19ನಿಂದಾಗಿ ಆರ್ಥಿಕತೆಯು ಪಾತಾಳಕ್ಕಿಳಿದಿದೆ. ಅದನ್ನು ಮೇಲಕ್ಕೆತ್ತುವ ಸಾಮರ್ಥ್ಯ ನಮ್ಮ ಪಕ್ಷಕ್ಕಿದೆ’ ಎಂದು ಮಾಜಿ ಪ್ರಧಾನಿ ಹಾಗೂ ಯುನೈಟೆಡ್ ನ್ಯಾಷನಲ್ ಪಾರ್ಟಿಯ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
225 ಸದಸ್ಯ ಬಲದ ಲೋಕಸಭೆ ಚುನಾವಣೆಯ ಫಲಿತಾಂಶವು ಗುರುವಾರ ಸಂಜೆ ಪ್ರಕಟವಾಗುತ್ತದೆ ಎಂದು ಹೇಳಲಾಗಿದೆ.
ಕೋವಿಡ್–19 ಕಾರಣದಿಂದಾಗಿ ಈ ಸಲದ ಚುನಾವಣೆಯನ್ನು ಎರಡು ಬಾರಿ ಮುಂದಕ್ಕೆ ಹಾಕಲಾಗಿತ್ತು. ಏಪ್ರಿಲ್ 25ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಜೂನ್ 20ಕ್ಕೆ ಮುಂದೂಡಲಾಗಿತ್ತು. ಆಗಸ್ಟ್ 5ರಂದು ಚುನಾವಣೆ ಪ್ರಕ್ರಿಯೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.