ADVERTISEMENT

ಗಡಿಯಲ್ಲಿ ಶಾಂತಿ ಸ್ಥಾಪನೆ: ಒಮ್ಮತದ ನಿರ್ಧಾರ ಗೌಪ್ಯವಾಗಿಡಬೇಡಿ -ವಿಕ್ರಮ್‌ ಮಿಸ್ರಿ

ಚೀನಾ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದ ಭಾರತದ ರಾಯಭಾರಿ ವಿಕ್ರಮ್‌ ಮಿಸ್ರಿ

ಪಿಟಿಐ
Published 20 ಏಪ್ರಿಲ್ 2021, 11:09 IST
Last Updated 20 ಏಪ್ರಿಲ್ 2021, 11:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಶಾಂತಿ ನೆಲೆಸುವಂತೆ ಮಾಡಲು ಉಭಯ ದೇಶಗಳ ನಾಯಕರ ನಡುವಿನ ಒಮ್ಮತದ ನಿರ್ಧಾರವನ್ನು ಗೌಪ್ಯವಾಗಿಡಬಾರದು ಎಂದು ಚೀನಾಕ್ಕೆ ಭಾರತ ಸ್ಪಷ್ಟವಾಗಿ ಹೇಳಿದೆ.

ಪೂರ್ವ ಲಡಾಖ್‌ನ ಗಡಿಯಲ್ಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಗಡಿ ಬಿಕ್ಕಟ್ಟಿನಿಂದಾಗಿ ಹಿನ್ನಡೆ ಅನುಭವಿಸಿದ್ದ ದ್ವಿಪಕ್ಷೀಯ ಸಂಬಂಧದ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಚೀನಾದಲ್ಲಿನ ಭಾರತದ ರಾಯಭಾರಿ ವಿಕ್ರಮ್‌ ಮಿಸ್ರಿ ಹೇಳಿದರು.

ಇಂಡಿಯನ್‌ ಕೌನ್ಸಿಲ್‌ ಆಫ್‌ ವರ್ಲ್ಡ್‌ ಅಫೇರ್ಸ್‌ (ಐಸಿಡಬ್ಲ್ಯುಎ) ಹಾಗೂ ಸಿಪಿಐಎಫ್‌ಎ (ಚೈನೀಸ್‌ ಪೀಪಲ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಾರಿನ್‌ ಅಫೇರ್ಸ್‌) ಜಂಟಿಯಾಗಿ ಆಯೋಜಿಸಿದ್ದ ವರ್ಚುವಲ್‌ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಎಲ್‌ಎಸಿಯಲ್ಲಿ ಶಾಂತಿ–ಸ್ಥಿರತೆ ಸಾಧಿಸುವ ಸಂಬಂಧ ಉಭಯ ದೇಶಗಳ ನಾಯಕರು ಒಮ್ಮತಕ್ಕೆ ಬಂದು ಕೈಗೊಂಡ ನಿರ್ಧಾರಗಳನ್ನು ಚೀನಾ ಏಕೆ ನಿರ್ಲಕ್ಷಿಸುತ್ತಿದೆ’ ಎಂದು ಮಿಸ್ರಿ ಅವರು ಚೀನಾ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾಯ್ದು ಹೋಗಲಿರುವ ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌’ ಹಾಗೂ ‘ಬೆಲ್ಟ್‌ ರೋಡ್‌ ಇನಿಷಿಯೇಟಿವ್‌ (ಬಿಆರ್‌ಐ)’ ಯೋಜನೆಗಳನ್ನು ಮಿಸ್ರಿ ಪ್ರಸ್ತಾಪಿಸಿದರು.

‘ಇತರ ದೇಶಗಳೊಂದಿಗೆ ಸಮಾಲೋಚನೆ, ಒಪ್ಪಂದ ಇಲ್ಲದೆಯೇ ಯಾವುದೇ ದೇಶ ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮುಂದಾಗಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.