ADVERTISEMENT

ಅಲ್‌ಕೈದಾ, ಐಎಸ್‌ ಜೊತೆ ನಂಟಿಲ್ಲ: ಎಲ್‌ಇಟಿ ಉಗ್ರ ಮಕ್ಕಿ

ಲಾಹೊರ್‌ ಜೈಲಿನಿಂದ ವಿಡಿಯೊ ಬಿಡುಗಡೆ

ಪಿಟಿಐ
Published 20 ಜನವರಿ 2023, 22:06 IST
Last Updated 20 ಜನವರಿ 2023, 22:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಹೋರ್: ಇಲ್ಲಿನ ಕೋಟ್ ಲಖಪತ್ ಜೈಲಿನಲ್ಲಿರುವ, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉಪನಾಯಕ ಅಬ್ದುಲ್‌ ರೆಹಮಾನ್ ಮಕ್ಕಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ‘ತನಗೆ ಅಲ್‌ ಕೈದಾ ಅಥವಾ ಇಸ್ಲಾಮಿಕ್‌ ಸ್ಟೇಟ್‌ನೊಂದಿಗೆ ಯಾವುದೇ ಸಂಪರ್ಕ ಇಲ್ಲ’ ಎಂಬುದಾಗಿ ಹೇಳಿಕೊಂಡಿದ್ದಾನೆ.

ಆದರೆ, 166 ಜನರು ಸಾವನ್ನಪ್ಪಿದ್ದ, ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣವನ್ನು ಈ ವಿಡಿಯೊದಲ್ಲಿ ಆತ ಪ್ರಸ್ತಾಪಿಸಿಲ್ಲ.

ಮಕ್ಕಿ, ಮುಂಬೈ ಮೇಲಿನ ದಾಳಿಯ ಸೂತ್ರಧಾರಿ ಹಾಗೂ ಉಗ್ರ ಸಂಘಟನೆ ಜಮಾತ್‌–ಉದ್‌–ದಾವಾ (ಜೆಯುಡಿ) ಮುಖಂಡ ಹಫೀಜ್‌ ಸಯೀದ್‌ನ ಬಾಮೈದ.

ADVERTISEMENT

68 ವರ್ಷದ ಮಕ್ಕಿಯನ್ನು ಕೆಲ ದಿನಗಳ ಹಿಂದೆಯಷ್ಟೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.

ಈ ಬಗ್ಗೆಯೂ ವಿಡಿಯೊದಲ್ಲಿ ಮಾತನಾಡಿರುವ ಮಕ್ಕಿ, ‘ಕೇವಲ ವದಂತಿಗಳು ಹಾಗೂ ಭಾರತ ಸರ್ಕಾರವು ನೀಡಿರುವ ತಪ್ಪು ಮಾಹಿತಿಯ ಆಧಾರದ ಮೇಲೆ ನನ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲಾಗಿದೆ’ ಎಂದಿದ್ದಾನೆ.

‘ಕೆಲ ವರದಿಗಳಲ್ಲಿ ಹೇಳಿರುವಂತೆ, ಒಸಾಮ ಬಿನ್‌ ಲಾಡೆನ್‌, ಆಯ್ಮನ್ ಅಲ್‌ ಝವಾಹಿರಿ ಅಥವಾ ಅಬ್ದುಲ್‌ ಅಜಮ್‌ ಅವರನ್ನು ನಾನು ಯಾವತ್ತೂ ಭೇಟಿ ಮಾಡಿಲ್ಲ’ ಎಂದೂ ಮಕ್ಕಿ ಹೇಳಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.