ADVERTISEMENT

ಚೀನಾ: ಶೀತಲೀಕರಿಸಿದ ಆಹಾರ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆ

ಪಿಟಿಐ
Published 18 ಅಕ್ಟೋಬರ್ 2020, 11:45 IST
Last Updated 18 ಅಕ್ಟೋಬರ್ 2020, 11:45 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಬೀಜಿಂಗ್‌: ಆಮದು ಮಾಡಿಕೊಳ್ಳಲಾದ,ಶೀತಲೀಕರಿಸಿದ ಮೀನಿನ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆಯಾಗಿರುವುದನ್ನು ಚೀನಾ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಬಂದರು ನಗರ ಚಿಂಗ್‌ದಾವ್‌ನಲ್ಲಿ ಈ ವೈರಸ್‌ ಪತ್ತೆಯಾಗಿದೆ. ಈ ಸೋಂಕು ಕಾಣಿಸಿಕೊಂಡ ನಂತರ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಶೀತಲೀಕರಿಸಿದ ಆಹಾರದ ಪೊಟ್ಟಣದ ಮೇಲೆ ಜೀವಂತ ವೈರಸ್ಅನ್ನು ಪತ್ತೆ ಹಚ್ಚಿ, ಪ್ರತ್ಯೇಕಿಸಲಾಗಿದೆ ಎಂದು ಸೆಂಟರ್‌ ಫಾರ್‌ ಡಿಸೀಜ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್ (ಸಿಡಿಸಿ) ಪ್ರಕಟಣೆ ತಿಳಿಸಿದೆ.

ಚಿಂಗ್‌ದಾವ್‌ ನಗರದಲ್ಲಿ ಇತ್ತೀಚೆಗೆ ಹೊಸದಾಗಿ ಕೋವಿಡ್‌ ಪ್ರಕರಣಗಳು ವರದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದಾದ ನಂತರ ನಗರದ 1.10 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಯಿತು. ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.

ADVERTISEMENT

ಆಮದು ಮಾಡಿಕೊಂಡಿದ್ದ ಮೀನಿನ ಪೊಟ್ಟಣಗಳು ಸೋಂಕಿಗೆ ಒಳಗಾಗಿದ್ದವು ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು ಎಂಬ ಸಿಡಿಸಿ ಪ್ರಕಟಣೆ ಉಲ್ಲೇಖಿಸಿ ಸರ್ಕಾರ ಒಡೆತನದ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಯಾವ ದೇಶಗಳಿಂದ ಈ ಶೀತಲೀಕರಿಸಿದ ಆಹಾರ ಪೊಟ್ಟಣಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಸಿಡಿಸಿ ಮಾಹಿತಿ ನೀಡಿಲ್ಲ ಎಂದೂ ಸುದ್ದಿಸಂಸ್ಥೆ ಹೇಳಿದೆ.

6.7 ಲಕ್ಷ ಶೀತಲೀಕರಿಸಿದ ಆಹಾರ ಪೊಟ್ಟಣಗಳಿಂದಲೂ ಸೇರಿದಂತೆ ಚೀನಾದ 24 ಪ್ರಾಂತ್ಯಗಳಿಂದ ಒಟ್ಟು 29 ಲಕ್ಷ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಶೀತಲೀಕರಿಸಿದ ಆಹಾರ ಇರುವ ಪೊಟ್ಟಣಗಳಿಂದ ಸಂಗ್ರಹಿಸಿದ್ದ 22 ಮಾದರಿಗಳಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢಪಟ್ಟಿತ್ತು ಎಂದು ಸಿಡಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.