ಹೀಥ್ರೂ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ವಿಮಾನವೊಂದು ನಿಲ್ದಾಣದಲ್ಲಿ ನಿಂತಿತ್ತು
ಪಿಟಿಐ ಚಿತ್ರ
ನವದೆಹಲಿ/ ಲಂಡನ್: ಸಮೀಪದ ವಿದ್ಯುತ್ ಉಪ ಸ್ಥಾವರ ದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಿಂದಾಗಿ ಬ್ರಿಟನ್‌ನ ಹೀಥ್ರೂ ವಿಮಾನ ನಿಲ್ದಾಣವು ಶುಕ್ರವಾರ ಮುಂಜಾನೆ ಕಾರ್ಯಾ
ಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇದರಿಂದಾಗಿ ತನ್ನ ಒಂದು ವಿಮಾನ ಮುಂಬೈಗೆ ವಾಪಸಾಗುತ್ತಿದ್ದು, ದೆಹಲಿ ಯಿಂದ ಹೊರಟಿದ್ದ ಇನ್ನೊಂದು ವಿಮಾನ ವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಹೀಥ್ರೂ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸ ಬೇಕಿದ್ದ ಇತರ ವಿಮಾನ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಲವು ಸಂಸ್ಥೆಗಳ ವಿಮಾನಗಳ ಸಂಚಾರ ರದ್ದಾಗಿರುವುದರಿಂದ ಜಾಗತಿಕವಾಗಿ ಸುಮಾರು 1.45 ಲಕ್ಷ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಂ ಹೇಳಿದೆ.
ವಿದ್ಯುತ್ ವ್ಯತ್ಯಯದಿಂದಾಗಿ ಲಂಡನ್ ಹೀಥ್ರೂ (ಎಲ್ಎಚ್ಆರ್) ನಿಲ್ದಾಣದ ಕಾರ್ಯಾಚರಣೆ ಶುಕ್ರವಾರ ಸ್ಥಳೀಯ ಕಾಲಮಾನ ರಾತ್ರಿ 11.59ರವರೆಗೆ ಸ್ಥಗಿತವಾಗಲಿದೆ.1,350 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
‘ಲಂಡನ್ ಹೀಥ್ರೂಗೆ ಹೋಗಲಿದ್ದ ಮತ್ತು ಅಲ್ಲಿಂದ ಭಾರತಕ್ಕೆ ಬರಲಿದ್ದ ಏರ್ ಇಂಡಿಯಾದ ಎಲ್ಲ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಹಾಗೆಯೇ ಲಂಡನ್‌ನ ಗ್ಯಾಟ್ವಿಕ್‌ಗೆ ಸಂಚರಿಸುವ ತನ್ನ ವಿಮಾನಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಏರ್ ಇಂಡಿಯಾ ಹೇಳಿದೆ.
ಯುರೋಪಿನ ಅತ್ಯಂತ ಹೆಚ್ಚು ಪ್ರಯಾಣಿಕರ ದಟ್ಟಣೆಯ ವಿಮಾನ ನಿಲ್ದಾಣವೆನಿಸಿರುವ ಲಂಡನ್‌ನ ಹೀಥ್ರೂ ಶುಕ್ರವಾರ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸುಮಾರು 1.45 ಲಕ್ಷ ಪ್ರಯಾಣಿಕರು ತೊಂದರೆಗೆ ಸಿಲುಕಿದರು.
ಫ್ಲೈಟ್ ಟ್ರ್ಯಾಕಿಂಗ್ ಸೇವೆ ಒದಗಿಸುವ ಫ್ಲೈಟ್ ರೇಡಾರ್ 24ರ ಪ್ರಕಾರ, ಬೆಂಕಿ ಅವಘಡದಿಂದಾಗಿ, ಹೀಥ್ರೂಗೆ ಬರುವ ಮತ್ತು ಅಲ್ಲಿಂದ ನಿರ್ಗಮಿಸುವ ಸುಮಾರು 1,350 ವಿಮಾನಗಳ ಸಂಚಾರದ ಮೇಲೆ ಪರಿಣಾಮ ಉಂಟಾಗಿತ್ತು.
ಬೆಂಕಿ ಅವಘಡ ಸಂಭವಿಸಿದ 18 ಗಂಟೆಗಳ ನಂತರ, ಶುಕ್ರವಾರ ಸಂಜೆ ಹೀಥ್ರೂ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿತು. ಬ್ರಿಟಿಷ್ ಏರ್‌ವೇಸ್‌ನ ವಿಮಾನವು ಇಲ್ಲಿ ಬಂದಿಳಿಯಿತು.
ರದ್ದಾದ ವಿಮಾನಗಳಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಡುವೆ ಸಂಚರಿಸುವ ವಿಮಾನಗಳು ಸೇರಿವೆ. ಅದರಲ್ಲಿಯೂ ಅಮೆರಿಕದ ವಿಮಾನಗಳ ಸಂಖ್ಯೆ ಹೆಚ್ಚಿದೆ. ಸದ್ಯ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮರು ನಿಗದಿಪಡಿಸಬೇಕಿರುವುದರಿಂದ ಇದರ ಪರಿಣಾಮವು ಹಲವು ದಿನಗಳವರೆಗೆ ಆಗುವ ಸಾಧ್ಯತೆಯಿದೆ.
ನಿಲ್ದಾಣ ಮುಚ್ಚುವುದಾಗಿ ಪ್ರಕಟಿಸಿದಾಗ ಸುಮಾರು 120 ವಿಮಾನಗಳು ವಾಯು ಮಾರ್ಗದಲ್ಲಿದ್ದವು. ಇವುಗಳಲ್ಲಿ ಕೆಲವು ವಿಮಾನಗಳಿಗೆ ವಾಪಸಾಗಲು ಸೂಚಿಸಲಾಯಿತು. ಇನ್ನು ಕೆಲವು ವಿಮಾನಗಳನ್ನು ಲಂಡನ್ ಬಳಿಯ ಗ್ಯಾಟ್ವಿಕ್, ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲೆ ಮತ್ತು ಐರ್ಲೆಂಡ್‌ನ ಶಾನನ್ ಸೇರಿ ಪರ್ಯಾಯ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಿಸಲಾಯಿತು.
ವಿದ್ಯುತ್ ಪುನಃಸ್ಥಾಪನೆ ಅಸ್ಪಷ್ಟ: ‘ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಯಾವಾಗ ಯಥಾಸ್ಥಿತಿಗೆ ಮರಳಲಿದೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಹತ್ತಿರದ ವಿದ್ಯುತ್ ಉಪಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಹಲವು ದಿನಗಳವರೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಹೀಥ್ರೂ ವಿಮಾನ ನಿಲ್ದಾಣವು ಹೇಳಿಕೆ ಬಿಡುಗಡೆ ಮಾಡಿದೆ.
ಈ ಅವಘಡದ ಕಾರಣದ ಪತ್ತೆಗೆ ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.