ADVERTISEMENT

ರಾಮ ಮಂದಿರ ಶಿಲಾನ್ಯಾಸ: ಅಮೆರಿಕದ ಟೈಮ್‌ಸ್ಕ್ವೇರ್‌ನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ

ಪಿಟಿಐ
Published 30 ಜುಲೈ 2020, 7:24 IST
Last Updated 30 ಜುಲೈ 2020, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ನಡೆಯಲಿರುವ ರಾಮಂದಿರ ನಿರ್ಮಾಣದ ಭೂಮಿಪೂಜೆಯ ಐತಿಹಾಸಿಕದಿನದ ಸಂಭ್ರಮಾಚರಣೆಗಾಗಿ ಇಲ್ಲಿನ ಪ್ರತಿಷ್ಠಿತ ಟೈಮ್‌ಸ್ಕ್ವೇರ್‌ನಲ್ಲಿ ಭಾರಿ ಸಿದ್ಧತೆಗಳು ನಡೆದಿವೆ.

ಟೈಮ್‌ಸ್ಕ್ವೇರ್‌ ಸುತ್ತಾ ನಾಸ್ಡಾಕ್ ಬೃಹತ್ ಪರದೆಯನ್ನು ಜೋಡಿಸಿದ್ದಾರೆ. 17 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಎಲ್‌ಇಡಿ ಡಿಸ್ಪ್ಲೆ ಸ್ಕ್ರೀನ್ ಅಳವಡಿಸಲಾಗುತ್ತಿದೆ. ಹೈರೆಸಲ್ಯೂಷನ್ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿದ್ದಾರೆ. ಶ್ರೀರಾಮನ ಚಿತ್ರವಿರುವ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ.

ಟೈಮ್‌ಸ್ಕ್ವೇರ್‌ನಲ್ಲಿ ನಡೆಯುತ್ತಿರುವ ‘ರಾಮಮಂದಿರ ಶಿಲಾನ್ಯಾಸ ದಿನದ ಸಂಭ್ರಮಾಚರಣೆ’ಯ ಸಿದ್ಧತೆ ಕುರಿತು ಮಾಹಿತಿ ಹಂಚಿಕೊಂಡ ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್‌ ಕಮಿಟಿಯ ಜಗದೀಶ್ ಶೇವಾನಿ, ‘ಇದೊಂದು ಜೀವಮಾನದಲ್ಲಿ ನಡೆಯುವ ಅತ್ಯಂತ ಅಪರೂಪದ ಕಾರ್ಯಕ್ರಮ. ಆ ದಿನವನ್ನು ಸಂಭ್ರಮವಿಸುದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದರು.

ADVERTISEMENT

‘ಆಗಸ್ಟ್ 5ರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ, ಈ ಎಲ್ಲ ಸ್ಕ್ರೀನ್‌ಗಳಲ್ಲೂ ಶ್ರೀರಾಮನ ಚಿತ್ರಗಳು, ದೃಶ್ಯಗಳ ಪ್ರಸಾರದ ಜತೆಗೆ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ‘ಜೈ ಶ್ರೀರಾಮ್‌’ ಘೋಷಣೆಗಳು ಮೊಳಗಲಿವೆ’ ಎಂದು ತಿಳಿಸಿದರು.

‘ರಾಮಮಂದಿರದ 3ಡಿ ಪೋಸ್ಟರ್‌ಗಳು ಮತ್ತು ಮಂದಿರದೊಳಗಿನ ವಾಸ್ತುಶಿಲ್ಪ, ವಿನ್ಯಾಸದ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ಭೂಮಿಪೂಜೆ ನೆರವೇರಿಸುವ ದೃಶ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಇದು ವರ್ಷದಲ್ಲೊಮ್ಮೆಯೋ ಅಥವಾ ಶತಮಾನದಲ್ಲೊಮ್ಮೆಯೋ ನಡೆಯುವ ಕಾರ್ಯಕ್ರಮವಲ್ಲ. ಇದು ಜೀವಮಾನದಲ್ಲಿ ಒಮ್ಮೆ ನಡೆಯುವಂತಹ ಐತಿಹಾಸಿಕ ಕಾರ್ಯಕ್ರಮ. ಭೂಮಿ ಪೂಜೆ ಕಾರ್ಯಕ್ರಮದಂದು ಇಲ್ಲಿರುವ ಎಲ್ಲ ಭಾರತೀಯರು ಟೈಮ್‌ಸ್ಕ್ವೇರ್‌ಗೆ ಬರುತ್ತಾರೆ. ಅವರೆಲ್ಲರ ಸಹಕಾರದಿಂದ ಇಂಥದ್ದೊಂದು ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.