ADVERTISEMENT

ನ್ಯೂಯಾರ್ಕ್ ಜೈಲು ಸೇರಿದ ಮಡೂರೊ: ವೆನೆಜುವೆಲಾದಲ್ಲಿ ಅಧಿಕಾರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:12 IST
Last Updated 4 ಜನವರಿ 2026, 16:12 IST
ನಿಕೊಲಸ್‌ ಮಡೂರೊ (ಮಧ್ಯ) ಅವರನ್ನು ನ್ಯೂಯಾರ್ಕ್‌ನ ಮಾದಕ ಪದಾರ್ಥ ತಡೆ ಕೇಂದ್ರದ ಕಚೇರಿಗೆ ಕರೆತಂದಾಗಿನ ದೃಶ್ಯ –ಎಎಫ್‌ಪಿ ಚಿತ್ರ
ನಿಕೊಲಸ್‌ ಮಡೂರೊ (ಮಧ್ಯ) ಅವರನ್ನು ನ್ಯೂಯಾರ್ಕ್‌ನ ಮಾದಕ ಪದಾರ್ಥ ತಡೆ ಕೇಂದ್ರದ ಕಚೇರಿಗೆ ಕರೆತಂದಾಗಿನ ದೃಶ್ಯ –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಪಡೆಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಹಿಡಿದು ಒಯ್ದಿರುವ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಹಾಗೂ ಅವರ ಪತ್ನಿಯನ್ನು ನ್ಯೂಯಾರ್ಕ್‌ನ ಬ್ರೂಕ್ಲಿನ್ ಜೈಲಿನಲ್ಲಿ ಇರಿಸಲಾಗಿದೆ.

ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನೆಜುವೆಲಾದ ರಾಜಧಾನಿ ಕರಾಕಸ್‌ ಮೇಲೆ ವಾಯು ದಾಳಿ ನಡೆಸಿ ಮಡೂರೊ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್‌ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. 

ದಾಳಿಯ ಬೆನ್ನಲ್ಲೇ ಇಬ್ಬರನ್ನೂ ಕರಾಕಸ್‌ನಿಂದ ಹೆಲಿಕಾಪ್ಟರ್‌ನಲ್ಲಿ ಅಮೆರಿಕದ ಯುದ್ಧನೌಕೆಗೆ ಕರೆದೊಯ್ಯಲಾಯಿತು. ಶನಿವಾರ ಅಲ್ಲಿಂದ ವಿಮಾನದಲ್ಲಿ ಅಮೆರಿಕದ ಸೇನಾ ನೆಲೆಯೊಂದಕ್ಕೆ ಸ್ಥಳಾಂತರಿಸಲಾಯಿತು. ಆ ಬಳಿಕ ಹೆಲಿಕಾಪ್ಟರ್‌ನಲ್ಲಿ ನ್ಯೂಯಾರ್ಕ್‌ಗೆ ಸ್ಥಳಾಂತರಿಸಲಾಯಿತು. ಮಾದಕ ವಸ್ತು ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿ ವಿಚಾರಣೆ ಎದುರಿಸಲಿದ್ದಾರೆ.

ADVERTISEMENT

ಅಮೆರಿಕದ ಪೊಲೀಸ್‌ ಅಧಿಕಾರಿಗಳು ಕೈಕೋಳ ತೊಡಿಸಿ ಮಡೂರೊ ಅವರನ್ನು ನ್ಯೂಯಾರ್ಕ್‌ನ ಮಾದಕ ಪದಾರ್ಥ ತಡೆ ಕೇಂದ್ರದ ಕಚೇರಿಗೆ ಕರೆದೊಯ್ದ ವಿಡಿಯೊವನ್ನು ಶ್ವೇತಭವನವು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. 63 ವರ್ಷ ವಯಸ್ಸಿನ ಮಡೂರೊ ಈ ವೇಳೆ ಅಲ್ಲಿದ್ದ ಅಧಿಕಾರಿಗಳನ್ನುದ್ದೇಶಿಸಿ, ‘ಶುಭರಾತ್ರಿ, ಹೊಸ ವರ್ಷದ ಶುಭಾಶಯಗಳು’ ಎಂದು ಹೇಳಿರುವುದು ವಿಡಿಯೊದಲ್ಲಿದೆ. 

‘ಮಾದಕ ದ್ರವ್ಯ-ಭಯೋತ್ಪಾದನೆ’ ಪಿತೂರಿ ಸೇರಿದಂತೆ ವಿವಿಧ ಆರೋಪಗಳನ್ನು ಅವರ ಮೇಲೆ ಅಮೆರಿಕ ಹೊರಿಸಿದೆ. ಮಡೂರೊ ಅವರನ್ನು ಸೋಮವಾರ ಮ್ಯಾನ್‌ಹಟನ್‌ನ ಫೆಡರಲ್‌ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವೆನೆಜುವೆಲಾದಲ್ಲಿ ಅಧಿಕಾರವು ನಾವು ಬಯಸಿದ ರೀತಿಯಲ್ಲಿ ವರ್ಗಾವಣೆಯಾಗುವವರೆಗೂ ಆ ದೇಶದ ಆಡಳಿತವನ್ನು ನೋಡಿಕೊಳ್ಳಲಿದ್ದೇವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಅಲ್ಲಿನ ಆಡಳಿತ ನೋಡಿಕೊಳ್ಳಲು ತಮ್ಮ ಸಂಪುಟದ ಕೆಲವರನ್ನು ನೇಮಿಸಲಾಗುವುದು ಎಂದಿದ್ದಾರೆ. 

ಆದರೆ ಅಮೆರಿಕ ಸೇನೆಗೆ ವೆನೆಜುವೆಲಾ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವ ಕಾರಣ, ಅಲ್ಲಿನ ಆಡಳಿತವನ್ನು ಹೇಗೆ ನೋಡಿಕೊಳ್ಳುವರು ಎಂಬುದು ಸ್ಪಷ್ಟವಾಗಿಲ್ಲ. ಇದರಿಂದ ಅಧಿಕಾರ ವರ್ಗಾವಣೆ ಕುರಿತ ಅನಿಶ್ಚಿತ ಸ್ಥಿತಿ ಮುಂದುವರಿದಿದೆ. ಮಡೂರೊ ದೇಶದಲ್ಲಿ ಇಲ್ಲದಿದ್ದರೂ ಅವರದ್ದೇ ಸರ್ಕಾರ ಅಧಿಕಾರದಲ್ಲಿ ಮುಂದುವರಿದಿದ್ದು, ಆಡಳಿತ ವರ್ಗಾವಣೆ ವಿಚಾರದಲ್ಲಿ ಅಮೆರಿಕದ ಜತೆ ಸಹಕರಿಸುವ ಯಾವುದೇ ಸಾಧ್ಯತೆಯಿಲ್ಲ. 

ಶನಿವಾರ ಮಧ್ಯಾಹ್ನ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ ಅವರು ಅಮೆರಿಕದ ದಾಳಿಯನ್ನು ಖಂಡಿಸಿದರು. 

‘ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದ ಡೆಲ್ಸಿ, ಮಡೂರೊ ಅವರನ್ನು ‘ವೆನೆಜುವೆಲಾದ ಏಕೈಕ ಅಧ್ಯಕ್ಷರು’ ಎಂದು ಕರೆದರು. ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನಿಜುವೆಲಾದ ನ್ಯಾಯಾಲಯವು ರಾಡ್ರಿಗಸ್‌ ಅವರಿಗೆ ಶನಿವಾರ ರಾತ್ರಿ ಆದೇಶಿಸಿದೆ.

ವಿರೋಧಿಗಳ ಸಂಭ್ರಮ: ಮಡೂರೊ ಅವರ ಸರ್ಕಾರದ ದಬ್ಬಾಳಿಕೆ ಮತ್ತು ಆರ್ಥಿಕ ಕುಸಿತದಿಂದ ಬೇಸತ್ತು ವೆನೆಜುವೆಲಾ ತೊರೆದು ಇತರ ದೇಶಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ಮಂದಿ ಅಮೆರಿಕದ ಕ್ರಮವನ್ನು ಸ್ವಾಗತಿಸಿದ್ದಾರೆ. ಮಡೂರೊ ಅವರನ್ನು ಪದಚ್ಯುತಗೊಳಿಸಿದ್ದಕ್ಕೆ ಬೆಂಬಲ ಸೂಚಿಸಿ ಫ್ಲಾರಿಡಾ ಸೇರಿದಂತೆ ವಿವಿಧ ನಗರಗಳಲ್ಲಿ ಬೀದಿಗಿಳಿದು ಸಂಭ್ರಮಿಸಿದರು.

ಇದೇ ವೇಳೆ, ಅಮೆರಿಕದ ದಾಳಿಯನ್ನು ಖಂಡಿಸಿ ವೆನೆಜುವೆಲಾ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರತಿಭಟನೆಗಳು ನಡೆದವು.

ನ್ಯಾಯಾಲಯಕ್ಕೆ ಇಂದು ಹಾಜರು

* ಮಡೂರೊ ಅವರನ್ನು ಇಂದು ನ್ಯೂಯಾರ್ಕ್‌ನ ಮ್ಯಾನ್‌ಹಟನ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ

* ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನೆಜುವೆಲಾ ನ್ಯಾಯಾಲಯ ಆದೇಶಿಸಿದೆ

* ಅಮೆರಿಕದ ದಾಳಿಯಲ್ಲಿ ಕೆಲವು ನಾಗರಿಕರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಡೆಲ್ಸಿ ರಾಡ್ರಿಗಸ್ ಹೇಳಿದ್ದಾರೆ. ಆದರೆ ಮೃತರ ನಿಖರ ಸಂಖ್ಯೆ ನೀಡಿಲ್ಲ

* ವೆನೆಜುವೆಲಾ ಸ್ವತಂತ್ರ ರಾಷ್ಟ್ರವಾಗಿಯೇ ಉಳಿಯಬೇಕು: ಪೋಪ್‌ ಲಿಯೊ ಕರೆ * ವಿಶ್ವದ ವಿವಿಧ ನಗರಗಳಲ್ಲಿ ಅಮೆರಿಕ ಪರ–ವಿರೋಧ ರ್‍ಯಾಲಿ

ನೇರವಾಗಿ ಟೀಕಿಸದ ಭಾರತ

ನವದೆಹಲಿ: ವೆನೆಜುವೆಲಾದಲ್ಲಿ ಅಮೆರಿಕ ಕೈಗೊಂಡ ಕಾರ್ಯಾಚರಣೆಯನ್ನು ಭಾರತವು ನೇರವಾಗಿ ಟೀಕಿಸುವುದಕ್ಕೆ ಮುಂದಾಗಿಲ್ಲ. ಅಲ್ಲಿನ ಬೆಳವಣಿಗೆ ಬಗ್ಗೆ ‘ಕಳವಳ’ ಮಾತ್ರ ವ್ಯಕ್ತಪಡಿಸಿದೆ. ಆ ಮೂಲಕ ‘ಬ್ರಿಕ್ಸ್‌’ ಗುಂಪಿನ ಇತರ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿರುವ ಬ್ರೆಜಿಲ್‌ ರಷ್ಯಾ ಮತ್ತು ಚೀನಾಕ್ಕಿಂತ ಭಿನ್ನ ನಿಲುವು ತಳೆದಿದೆ. 

‘ವೆನೆಜುವೆಲಾದಲ್ಲಿನ ಈಚೆಗಿನ ಬೆಳವಣಿಗೆಗಳು ತೀವ್ರ ಕಳವಳ ಉಂಟುಮಾಡಿವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.

‘ವೆನೆಜುವೆಲಾ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ. ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಮಸ್ಯೆಯನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಕರೆ ನೀಡುತ್ತೇವೆ’ ಎಂದಿದೆ. ಚೀನಾ ರಷ್ಯಾ ಮತ್ತು ಬ್ರೆಜಿಲ್‌ ದೇಶಗಳು ಅಮೆರಿಕದ ದಾಳಿಯನ್ನು ಖಂಡಿಸಿವೆ. 

ಕಾನೂನಿನ ಉಲ್ಲಂಘನೆ ಸಲ್ಲ: ‘ವೆನೆಜುವೆಲಾದಲ್ಲಿ ಅಮೆರಿಕ ಕೈಗೊಂಡ ಕ್ರಮಗಳ ಬಗ್ಗೆ ಕಾಂಗ್ರೆಸ್‌ ಪಕ್ಷ ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ಯಾವುದೇ ಒಂದು ದೇಶ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವಂತಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಏನೆಲ್ಲಾ ಆರೋಪ?

ಮಡೂರೊ ಮತ್ತು ಪತ್ನಿ ವಿರುದ್ಧ ನ್ಯೂಯಾರ್ಕ್‌ನ ಸದರ್ನ್‌ ಡಿಸ್ಟ್ರಿಕ್ಟ್‌ ನ್ಯಾಯಾಲಯದಲ್ಲಿ ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಜನರಲ್‌ ಪಮೆಲಾ ಬಾಂಡಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಾದಕ ದ್ರವ್ಯ-ಭಯೋತ್ಪಾದನೆ ಕೊಕೇನ್ ಆಮದು ಪಿತೂರಿ ಮಷೀನ್ ಗನ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮಷೀನ್‌ ಗನ್‌ಗಳು ಹಾಗೂ ಶಸ್ತ್ರಾಸ್ತ್ರ ಹೊಂದಲು ಪಿತೂರಿ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ.

ತಕ್ಷಣ ಬಿಡುಗಡೆಗೆ ಚೀನಾ ಒತ್ತಾಯ

ಬೀಜಿಂಗ್: ನಿಕೊಲಸ್ ಮಡೂರೊ ಮತ್ತು ಅವರ ಪತ್ನಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಚೀನಾ ಅಮೆರಿಕವನ್ನು ಭಾನುವಾರ ಒತ್ತಾಯಿಸಿದೆ.

‘ಮಡೂರೊ ಮತ್ತು ಅವರ ಪತ್ನಿಯನ್ನು ಅಮೆರಿಕವು ಬಲವಂತವಾಗಿ ದೇಶದಿಂದ ಹೊರಗೆ ಕರೆದೊಯ್ದಿರುವುದಕ್ಕೆ ಚೀನಾ ತೀವ್ರ ಕಳವಳ ವ್ಯಕ್ತಪಡಿಸುತ್ತದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

‘ಈ ಕ್ರಮವು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸನ್ನದಿನ ಉದ್ದೇಶಗಳು ಹಾಗೂ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಾದ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಚೀನಾವು ಅಮೆರಿಕವನ್ನು ಒತ್ತಾಯಿಸುತ್ತದೆ’ ಎಂದು ಹೇಳಿದೆ.

ಯುದ್ಧಕ್ಕೆ ಸಮನಾದ ಕೃತ್ಯ: ಮಮ್ದಾನಿ

ನ್ಯೂಯಾರ್ಕ್‌ನ ನೂತನ ಮೇಯರ್‌ ಜೊಹ್ರಾನ್‌ ಮಮ್ದಾನಿ ಅವರು ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಟ್ರಂಪ್‌ ಅವರ ಜತೆ ಮಾತನಾಡಿ ನನ್ನ ವಿರೋಧ ವ್ಯಕ್ತಪಡಿಸಿದ್ದೇನೆ’ ಎಂದು ಮಮ್ದಾನಿ ಹೇಳಿದ್ದಾರೆ. ‘ಸಾರ್ವಭೌಮ ರಾಷ್ಟ್ರದ ಮೇಲೆ ಏಕಪಕ್ಷೀಯವಾಗಿ ದಾಳಿ ನಡೆಸುವುದು ಯುದ್ಧಕ್ಕೆ ಸಮನಾದ ಕೃತ್ಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆಡಳಿತ ಬದಲಾವಣೆಗೆ ನಡೆದಿರುವ ಈ ಪ್ರಯತ್ನವು ನ್ಯೂಯಾರ್ಕ್‌ನಲ್ಲಿ ನೆಲಸಿರುವ ವೆನೆಜುವೆಲಾದವರು ಮಾತ್ರವಲ್ಲ ನಗರದ ಇತರ ನಿವಾಸಿಗಳ ಮೇಲೂ ಪರಿಣಾಮ ಬೀರುತ್ತದೆ. ಈ ನಗರವನ್ನು ‘ನಮ್ಮ ಮನೆ’ ಎಂದು ಕರೆಯುವ ವೆನೆಜುವೆಲಾದ ಸಾವಿರಾರು ಮಂದಿ ಇಲ್ಲಿದ್ದಾರೆ. ಅವರ ಸುರಕ್ಷತೆ ಸೇರಿದಂತೆ ನ್ಯೂಯಾರ್ಕ್‌ನ ಪ್ರತಿಯೊಬ್ಬರ ಸುರಕ್ಷತೆಯ ಮೇಲೆ ನನ್ನ ಗಮನ ಇರಲಿದೆ. ನನ್ನ ಆಡಳಿತವು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿದೆ’ ಎಂದಿದ್ದಾರೆ.

ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಇಂತಹ ಬೆಳವಣಿಗೆಗಳು ಅಪಾಯಕಾರಿ ಪೂರ್ವನಿದರ್ಶನವನ್ನು ಸೃಷ್ಟಿಸುತ್ತವೆ 
-ಅಂಟೊನಿಯೊ ಗುಟೆರಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ವೆನೆಜುವೆಲಾದ ಉಳಿದ ನಾಯಕರು ‘ಸರಿಯಾದ ದಿಕ್ಕಿನಲ್ಲಿ’ ಮುನ್ನಡೆದರೆ ಅವರೊಂದಿಗೆ ಸೇರಿ ಕೆಲಸ ಮಾಡಲು ಅಮೆರಿಕ ಸಿದ್ಧವಾಗಿದೆ
-ಮಾರ್ಕೊ ರುಬಿಯೊ, ವಿದೇಶಾಂಗ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.