ADVERTISEMENT

ಅಮೆರಿಕ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಸೆರೆಹಿಡಿದಿದ್ದು ಹೇಗೆ?

150 ವಿಮಾನಗಳು, 2 ಗಂಟೆ 20 ನಿಮಿಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:12 IST
Last Updated 4 ಜನವರಿ 2026, 16:12 IST
<div class="paragraphs"><p>ನಿಕೊಲಸ್‌ ಮಡೂರೊ (ಮಧ್ಯ) ಅವರನ್ನು ನ್ಯೂಯಾರ್ಕ್‌ನ&nbsp;ಮಾದಕ ಪದಾರ್ಥ ತಡೆ ಕೇಂದ್ರದ ಕಚೇರಿಗೆ ಕರೆತಂದಾಗಿನ ದೃಶ್ಯ </p></div>

ನಿಕೊಲಸ್‌ ಮಡೂರೊ (ಮಧ್ಯ) ಅವರನ್ನು ನ್ಯೂಯಾರ್ಕ್‌ನ ಮಾದಕ ಪದಾರ್ಥ ತಡೆ ಕೇಂದ್ರದ ಕಚೇರಿಗೆ ಕರೆತಂದಾಗಿನ ದೃಶ್ಯ

   

ವಾಷಿಂಗ್ಟನ್‌: ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರ ‘ಭದ್ರಕೋಟೆ’ ಭೇದಿಸಲು ಅಮೆರಿಕ ಸೇನೆಯ ‘ಡೆಲ್ಟಾ’ ಪಡೆ 2025ರ ಸೆಪ್ಟೆಂಬರ್‌ನಿಂದಲೇ ವೆನುಜುವೆಲಾ ಕರಾವಳಿಯಲ್ಲಿ ತರಬೇತಿ ನಡೆಸಿತ್ತು. ಇಡೀ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ‘ಕತ್ತಲ ಮರೆ’ಯಲ್ಲಿ ನಡೆಯುವಂತೆ ಯೋಜನೆ ರೂಪಿಸಲಾಗಿತ್ತು. ಮಡೂರೊ ಸೆರೆಗೆ ‘ಸಂಪೂರ್ಣ ಪರಿಹಾರ’ ಎಂಬ ಹೆಸರಿಡಲಾಗಿತ್ತು. 

ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿಯು (ಸಿಐಎ) ಮಡೂರೊ ಅವರ ಆಹಾರದಿಂದ –ನಿದ್ರೆಯವರೆಗೆ, ಅವರ ಸಾಕು ಪ್ರಾಣಿಗಳಿಂದ, ಧರಿಸುವ ಬಟ್ಟೆಯವರೆಗೆ ಪ್ರತಿಯೊಂದರ ಬಗ್ಗೆಯೂ ಇಂಚಿಂಚೂ ಮಾಹಿತಿ ಸಂಗ್ರಹಿಸಿತ್ತು. ಮಡೂರೊ ನಿವಾಸ ಮತ್ತು ಆವರಣದ ಪ್ರತಿಕೃತಿ ನಿರ್ಮಿಸಿಕೊಂಡಿದ್ದ ಡೆಲ್ಟಾ ಪಡೆಯು, ಈ ಕೋಟೆಗೆ ನುಗ್ಗಿ, ಅವರನ್ನು ಸೆರೆ ಹಿಡಿದು ಹೊರಗೆ ತರುವುದನ್ನು ರಹಸ್ಯವಾಗಿ ತಾಲೀಮು ನಡೆಸಿತ್ತು . ಒಂದು ವೇಳೆ ಮಡೂರೊ ತನ್ನ ಕೋಟೆಯೊಳಗಿನ ರಹಸ್ಯ ಕೊಠಡಿ ಸೇರಿಕೊಂಡರೆ, ಅದನ್ನು ಸ್ಫೋಟಿಸಲೂ ಯೋಜನೆ ರೂಪಿಸಿತ್ತು. ವಿಮಾನಗಳ ಪೈಲಟ್‌ಗಳು ಕತ್ತಲಲ್ಲಿ, ಪ್ರತಿಕೂಲ ಹವಾಮಾನದಲ್ಲೂ ಹಾರಾಟ ನಡೆಸುವುದರ ಬಗ್ಗೆ ತರಬೇತಿ ಪಡೆದುಕೊಂಡಿದ್ದರು.

ADVERTISEMENT

ತಿಂಗಳುಗಳು ನಡೆದ ರಹಸ್ಯ ಕಾರ್ಯಾಚರಣೆಗೆ ಜ.2ರ ತಡರಾತ್ರಿ ಮುಹೂರ್ತ ನಿಗದಿಯಾಗಿತ್ತು. ಟ್ರಂಪ್‌ ಅವರಿಂದ ಅಂತಿಮ ಆದೇಶ ಸಿಗುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿದ ಅಮೆರಿಕದ 150 ವಿಮಾನಗಳು ವೆನೆಜುವೆಲಾದ ರಾಜಧಾನಿ ಕರಾಕಸ್‌ ಅನ್ನು ಕತ್ತಲಲ್ಲಿ ಮುಳುಗಿಸಿದ್ದವು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಡೆಲ್ಟಾ ತಂಡವು, ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಸೆರೆ ಹಿಡಿದು, ಕರಾವಳಿಯಲ್ಲಿ ಲಂಗರು ಹಾಕಿದ್ದ ಅಮೆರಿಕದ ಯುದ್ಧನೌಕೆಗೆ ತಂದು ಇಳಿಸಿದ್ದರು.  ಒಟ್ಟಾರೆ ಕಾರ್ಯಾಚರಣೆ 2 ಗಂಟೆ 20 ನಿಮಿಷದಲ್ಲಿ ಮುಗಿಯಿತು.

ಕ್ರಿಸ್‌ಮಸ್‌ ರಜಾ ದಿನ ಕಳೆಯಲು ಫ್ಲಾರಿಡಾದ ಪಾಮ್‌ ಬೀಚ್‌ ಕ್ಲಬ್‌ಗೆ ತೆರಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಡೀ ಕಾರ್ಯಾಚರಣೆಯನ್ನು ಅಲ್ಲಿಂದ ನೇರ ವೀಕ್ಷಣೆ ಮಾಡಿದರು.

ಮಡೂರೊ ಸೆರೆ ಕಾರ್ಯಾಚರಣೆ ಹಿಂದಿನ ರೂವಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ರುಬಿಯೊ ಎಂಬ ವಿಶ್ಲೇಷಣೆಗಳು ಈಗ ನಡೆಯುತ್ತಿವೆ. ಮಾದಕವಸ್ತು ಭಯೋತ್ಪಾದನೆ ಪ್ರಕರಣದಲ್ಲಿ ಮಡೂರೊ ಅವರನ್ನು ಅಮೆರಿಕದ ನೆಲದಲ್ಲಿ, ಅಮೆರಿಕದ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವುದಾಗಿ ಅಲ್ಲಿನ ಅಟಾರ್ನಿ ಜನರಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.