ADVERTISEMENT

ವಿಶ್ವದ ಅತ್ಯುತ್ತಮ ಶಾಲೆ ಸ್ಪರ್ಧೆ: ಅಂತಿಮಘಟ್ಟದಲ್ಲಿ ಭಾರತದ ಶಾಲೆ

ಪಿಟಿಐ
Published 22 ಸೆಪ್ಟೆಂಬರ್ 2022, 15:49 IST
Last Updated 22 ಸೆಪ್ಟೆಂಬರ್ 2022, 15:49 IST

ಲಂಡನ್‌: ವಿಶ್ವದ ಅತ್ಯುತ್ತಮ ಶಾಲೆ ಸ್ಪರ್ಧೆಯ ಅಂತಿಮಘಟ್ಟಕ್ಕೆ ಗುರುವಾರ ಆಯ್ಕೆ ಮಾಡಲಾದ ಮೂರು ಶಾಲೆಗಳ ಪೈಕಿ ಮಹಾರಾಷ್ಟ್ರದ ಕುಗ್ರಾಮವೊಂದರ ಶಾಲೆ ಸೇರಿದೆ. ಬ್ರಿಟನ್‌ನ ‘ಟಿ4 ಎಜುಕೇಷನ್‌’ ಎನ್ನುವ ಡಿಜಿಟಲ್‌ ವೇದಿಕೆಯ ಈ ಸ್ಪರ್ಧೆಯನ್ನು ಪ್ರಾರಂಭಿಸಿದೆ.

ಸಾಮಾಜಿಕ ಸಹಭಾಗಿತ್ವ ವಿಭಾಗದಲ್ಲಿ ಪೂಣೆಯ ಭೋಪ್‌ಖೇಲ್‌ ಗ್ರಾಮದ ‘ಪಿಸಿಎಂಸಿ ಇಂಗ್ಲಿಷ್‌ ಮಾಧ್ಯಮ ಶಾಲೆ’ಯು ಅಂತಿಮಘಟ್ಟ ತಲುಪಿದೆ. ಮುಂದಿನ ತಿಂಗಳು ನಡೆಯುವ ವರ್ಲ್ಡ್‌ ಎಜುಕೇಷನ್‌ ವೀಕ್‌ನಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

ಸ್ಪರ್ಧೆಗೆ ₹2 ಕೋಟಿ ಪ್ರಶಸ್ತಿ ಮೊತ್ತವನ್ನು ನಿಗದಿ ಮಾಡಲಾಗಿದೆ. ಐದು ವಿಭಾಗಗಳಲ್ಲಿ ಗೆದ್ದವರು ಈ ಮೊತ್ತವನ್ನು ಹಂಚಿಕೊಳ್ಳಬೇಕು. ಅಂತೆಯೆ ಪ್ರತಿ ಶಾಲೆಗೆ ₹40 ಲಕ್ಷ ಹಂಚಿಕೆಯಾಗಲಿದೆ. ಎಕ್ಸೆಂಚರ್‌, ಅಮೆರಿಕನ್‌ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ಕಂಪನಿಗಳು ಪ್ರಶಸ್ತಿ ಮೊತ್ತಕ್ಕೆ ದೇಣಿಗೆ ನೀಡಿವೆ.

ADVERTISEMENT

ಹೇಗಿದೆ ಶಾಲೆ?: ‘ಪುಣೆಯ ಕುಗ್ರಾಮದ ಈ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ ಎನ್‌ಜಿಒ ಆಕಾಂಕ್ಷಾ ಫೌಂಡೇಷನ್‌ ಹಾಗೂ ಸ್ಥಳೀಯ ಸರ್ಕಾರ ಕೂಡ ಕೈ ಜೋಡಿಸಿದೆ. ವೈದ್ಯರು, ದಿನಸಿ ವ್ಯಾಪಾರಿಗಳು ಮತ್ತು ಧಾರ್ಮಿಕ ನಾಯಕರು ವಿದ್ಯಾರ್ಥಿಗಳ ಪೋಷಕರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತಿದ್ದಾರೆ’ ಎಂದು‘ಟಿ4 ಎಜುಕೇಷನ್‌’ ಸಂಸ್ಥೆ ಹೇಳಿದೆ.

‘ಈ ಶಾಲೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತದೆ. ಜೊತೆಗೆ ‘ಮಾಸ್ಟರ್‌ ಚೆಫ್‌’ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಮಕ್ಕಳಿಗೆ ಪ್ರತಿದಿನ ಮಕ್ಕಳಿಗೆ ತಿನ್ನಲು ಹಣ್ಣುಗಳನ್ನು ನೀಡಲಾಗುತ್ತದೆ. ವಾರವೊಂದರಲ್ಲಿ ಮಕ್ಕಳು ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಪ್ಲಾನ್‌ ತಯಾರಿಸಲಾಗಿದೆ. ಈ ಆರೋಗ್ಯಕರ ಆಹಾರ ಪದ್ಧತಿಯನ್ನು ಈಗ ಪೋಷಕರು ಪಾಲಿಸಲು ಪ್ರಾರಂಭಿಸಿದ್ದಾರೆ’ ಎಂದು ವಿವರಿಸಿದೆ.

ಒಟ್ಟು ಐದು ವಿಭಾಗಗಳಲ್ಲಿ ಅಂದರೆ, ಸಾಮಾಜಿಕ ಸಹಭಾಗಿತ್ವ, ಪರಿಸರ ಕಾರ್ಯ, ಹೊಸ ಕಲ್ಪನೆ, ಪ್ರತಿಕೂಲ ಪರಿಸ್ಥಿತಿಯನ್ನು ಮೀರುವುದು, ಆರೋಗ್ಯ ಜೀವನವನ್ನು ಬೆಂಬಲಿಸುವುದು ಎಂಬ ವಿಭಾಗಗಳಲ್ಲಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ವಿಭಾಗದಿಂದಲೂ ಅತ್ಯುತ್ತಮ ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಭಾಗಗಳಿಗೆ ವಿಶ್ವದಾದ್ಯಂತದಿಂದ ನೂರಾರು ಶಾಲೆಗಳು ಅರ್ಜಿ ಸಲ್ಲಿಸಿರುತ್ತವೆ. ತೀರ್ಪುಗಾರರು ಈ ಅರ್ಜಿಗಳನ್ನು ಪರಿಶೀಲಿಸಿ ಅಂತಿಮಘಟಕ್ಕೆ ಶಾಲೆಯನ್ನು ಪಟ್ಟಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.