ಢಾಕಾ: ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರವು ಪದಚ್ಯುತಿಗೊಂಡ ನಂತರ ದೇಶದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಿದೆ. 18 ಮಂದಿ ಠಾಣೆ ಉಸ್ತುವಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ, ಢಾಕಾದಲ್ಲಿರುವ 32 ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಭಾನುವಾರ ಮಧ್ಯರಾತ್ರಿ ವರ್ಗಾವಣೆ ಆದೇಶ ಕಳುಹಿಸಲಾಗಿದೆ ಎಂದು ಬಿಡಿನ್ಯೂಸ್24.ಕಾಮ್ ಸುದ್ದಿ ಪೋರ್ಟಲ್ ಹೇಳಿದೆ.
ಈವರೆಗೆ ಢಾಕಾ ಮೆಟ್ರೊಪಾಲಿಟನ್ ಪೊಲೀಸ್ (ಡಿಎಂಪಿ) ವ್ಯಾಪ್ತಿಯಲ್ಲಿ ಬರುವ 50 ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಆಗಸ್ಟ್ 13ರಂದು 18 ಮಂದಿ ಠಾಣೆ ಉಸ್ತುವಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ವರದಿ ಪ್ರಕಾರ, ವರ್ಗಾವಣೆಗೊಂಡ ಮುಖ್ಯಸ್ಥರ ಬಳಿ ಈ ಹಿಂದೆ ಇದ್ದ ಆದೇಶ ಹೊರಡಿಸುವ ಅಧಿಕಾರ ಇರುವುದಿಲ್ಲ. ಇವರಲ್ಲಿ ಕೆಲವರನ್ನು ದೇಶದಾದ್ಯಂತ ಇರುವ ಪೊಲೀಸ್ ಸಿಬ್ಬಂದಿ ತರಬೇತಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಉಳಿದವರನ್ನು ಪ್ರವಾಸಿ ಪೊಲೀಸ್, ಕೈಗಾರಿಕಾ ಪೊಲೀಸ್‌ಗಳಾಗಿ ವರ್ಗಾವಣೆ ಮಾಡಲಾಗಿದೆ.
ವರದಿ ಪ್ರಕಾರ, ಆಗಸ್ಟ್ 13ರಂದು ಮೂವರು ಹೆಚ್ಚುವರಿ ಮಹಾ ನಿರ್ದೇಶಕರು ಸೇರಿದಂತೆ 51 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಶನಿವಾರ, ಡಿಎಂಪಿ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮತ್ತು ಸಹಾಯಕ ಆಯುಕ್ತ ಶ್ರೇಣಿಯ 13 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅದೇ ದಿನ ಏಳು ಮಂದಿಯನ್ನು ಡಿಎಂಪಿ ಉಪ ಆಯುಕ್ತರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.
ಭಾನುವಾರ 73 ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.