ADVERTISEMENT

ಪ್ರಯಾಣಿಕರ ಕಣ್ಣಿಗೆ ಪೆಪ್ಪರ್‌ ಸ್ಪ್ರೇ:ಲಂಡನ್‌ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಸೆರೆ

ಪಿಟಿಐ
Published 7 ಡಿಸೆಂಬರ್ 2025, 16:14 IST
Last Updated 7 ಡಿಸೆಂಬರ್ 2025, 16:14 IST
   

ಲಂಡನ್‌: ಬ್ರಿಟನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿದ್ದ ಕೆಲವು ಪ್ರಯಾಣಿಕರಿಗೆ ಪೆಪ್ಪರ್‌ ಸ್ಪ್ರೇ ಎರಚಿ, ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ.

ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಬಂಧಿಸಿರುವುದಾಗಿ ಇಲ್ಲಿನ ಪೊಲೀಸರು ತಿಳಿಸಿದ್ದಾರೆ. 

ವಿಮಾನ ನಿಲ್ದಾಣದ ಟರ್ಮಿನಲ್‌ ಮೂರರಲ್ಲಿ ಪರಸ್ಪರ ಪರಿಚಯ ಹೊಂದಿರುವ ವ್ಯಕ್ತಿಗಳ ಗುಂಪೊಂದರಲ್ಲಿ ವಾಗ್ವಾದ ನಡೆದಿದೆ. ಅದೇ ಗುಂಪಿನ ಕೆಲವು ವ್ಯಕ್ತಿಗಳು, ಗುಂಪಿನ ಇತರೆ ಸದಸ್ಯರಿಗೆ ಪೆಪ್ಪರ್‌ ಸ್ಪ್ರೇ ಎರೆಚಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಜತೆಗೆ ಪೆಪ್ಪರ್‌ ಸ್ಪ್ರೇ ಎರಚಿದವರ ಪೈಕಿ ಒಬ್ಬ ಶಂಕಿತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಉಳಿದವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ದಾಳಿಗೆ ಒಳಗಾದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ. 

ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಸ್ವಲ್ಪಕಾಲ ಗೊಂದಲ ಏರ್ಪಟ್ಟು, ವಿಮಾನ ಪ್ರಯಾಣದಲ್ಲೂ ಏರುಪೇರು ಉಂಟಾಗಿದೆ. ಪ್ರಯಾಣಿಕರಿಗೆ ವಿಮಾನಗಳ ವಿಳಂಬದ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಇದು ಭಯೋತ್ಪಾದಕ ಕೃತ್ಯವಲ್ಲ ಜತೆಗೆ ಯಾವ ಪ್ರಯಾಣಿಕರಿಗೂ ಜೀವ ಹಾನಿಯಾಗುವ ಪರಿಸ್ಥಿತಿ ಉದ್ಭವಿಸಿಲ್ಲ ಎಂದೂ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.