ADVERTISEMENT

ಅಮೆರಿಕ | ಹುಟ್ಟುಹಬ್ಬದ ಪಾರ್ಟಿ ಮೇಲೆ ಗುಂಡಿನ ದಾಳಿ: ಆರು ಸಾವು

ಏಜೆನ್ಸೀಸ್
Published 10 ಮೇ 2021, 5:53 IST
Last Updated 10 ಮೇ 2021, 5:53 IST
ಗುಂಡಿನ ದಾಳಿಯಲ್ಲಿ ಮೃತಪಟ್ಟ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವು
ಗುಂಡಿನ ದಾಳಿಯಲ್ಲಿ ಮೃತಪಟ್ಟ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವು   

ಕೊಲರಾಡೊ (ಅಮೆರಿಕ): ಬಂದೂಕುಧಾರಿಯೊಬ್ಬ ಕೊಲರಾಡೊ ಸ್ಪ್ರಿಂಗ್ಸ್‌ ನಗರದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಗುಂಡಿನ ಮಳೆಗರೆದು ಆರು ಮಂದಿಯನ್ನು ಕೊಂದಿದ್ದಾನೆ. ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭಾನುವಾರ ಮಧ್ಯರಾತ್ರಿ ಈ ಪ್ರಕರಣ ನಡೆದಿದೆ. ಕೊಲರಾಡೊ ಸ್ಪ್ರಿಂಗ್ಸ್‌ನ ಪೂರ್ವಭಾಗದಲ್ಲಿ ತಾತ್ಕಾಲಿಕವಾಗಿ ಕಟ್ಟಿಕೊಂಡಿದ್ದ ಮನೆಯಲ್ಲಿ ಈ ದಾಳಿ ನಡೆದಿದೆ. ಮೃತಪಟ್ಟವರೆಲ್ಲರೂ ವಯಸ್ಕರು. ದಾಳಿಯ ನಂತರ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ದುಷ್ಕರ್ಮಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗಾರ, ಮೃತರಲ್ಲಿ ಒಳಗೊಂಡಿದ್ದ ಯುವತಿಯ ಪ್ರಿಯಕರ ಎನ್ನಲಾಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು, ಮಕ್ಕಳೂ ಇದ್ದರು.

ADVERTISEMENT

ಗುಂಡಿನ ಸದ್ದಿನಿಂದ ಎಚ್ಚರಗೊಂಡಿದ್ದಾಗಿ ನೆರೆಮನೆಯ ನಿವಾಸಿ ಯೆನಿಫರ್‌ ರೆಯೆಸ್‌, ‘ಡೆನ್ವರ್‌ ಪೋಸ್ಟ್‌’ಗೆ ತಿಳಿಸಿದ್ದಾರೆ.

ದಾಳಿಯಿಂದ ಕಂಗಾಲಾಗಿದ್ದ ಮಕ್ಕಳು ಅಳುತ್ತಿದ್ದರು. ಗಾಯಗಳಿಲ್ಲದೇ ಪಾರಾಗಿದ್ದ ಮಕ್ಕಳನ್ನು ಪೊಲೀಸರು ಈ ‘ಟ್ರೇಲರ್‌ ಮನೆ’ಯಿಂದ ಬೆಂಗಾವಲು ವಾಹನದಲ್ಲಿ ಕರೆದೊಯ್ದರು. ಅವರನ್ನು ಸಂಬಂಧಿಕರ ಮನೆಗೆ ತಲುಪಿಸಲಾಯಿತು.

ಕೊಲರಾಡೊ ಸ್ಪ್ರಿಂಗ್ಸ್‌ ನಗರವು, ಡೆನ್ವರ್‌ ಬಿಟ್ಟರೆ ಕೊಲರಾಡೊದ ಎರಡನೇ ಅತಿ ದೊಡ್ಡ ಊರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.